BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

MLC Kishorkumar Puttur ಕರಾವಳಿ ಮೀನುಗಾರರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ MLC ಕಿಶೋರ್ ಕುಮಾರ್ ಪುತ್ತೂರು ಗುಡುಗು


ಬೆಂಗಳೂರು, ಆಗಸ್ಟ್ 19 : ಕರಾವಳಿ ಮೀನುಗಾರರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ  ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಗುಡುಗಿದ್ದಾರೆ.

ರಾಜ್ಯ ಸರ್ಕಾರವು ಮೀನುಗಾರರ ಸುರಕ್ಷತೆಯ ವಿಚಾರದಲ್ಲಿ ತೋರುತ್ತಿರುವ ಘೋರ ನಿರ್ಲಕ್ಷ್ಯ ಹಾಗೂ ಮೀನುಗಾರರ ಜೀವದ ಜೊತೆ ಮಾಡುತ್ತಿರುವ ಚೆಲ್ಲಾಟವನ್ನು ಮಾನ್ಯ ವಿಧಾನ ಪರಿಷತ್ ಸದಸ್ಯರಾದ  ಕಿಶೋರ್ ಕುಮಾರ್ ಪುತ್ತೂರು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಂಗಳವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಕರಾವಳಿ ಮೀನುಗಾರರ ಸುರಕ್ಷತೆ ಮತ್ತು ಲೈಫ್ ಜಾಕೆಟ್ ವಿತರಣೆ ಕುರಿತು  ಕಿಶೋರ್ ಕುಮಾರ್ ಪುತ್ತೂರು ಅವರು ಕೇಳಿದ ಲಿಖಿತ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರವು ಅದರ ರೈತ ಮತ್ತು ಮೀನುಗಾರ ವಿರೋಧಿ ಧೋರಣೆಯನ್ನು ಬಟಾಬಯಲು ಮಾಡಿದೆ.

ಸಾವಿನ ಸಂಖ್ಯೆ ಏರಿಕೆ, ಲೈಫ್ ಜಾಕೆಟ್ ವಿತರಣೆ ಶೂನ್ಯ :

ಸರ್ಕಾರ ನೀಡಿದ ಅಂಕಿ-ಅಂಶಗಳ ಪ್ರಕಾರ ಕರಾವಳಿಯ 3 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 215 ಮೀನುಗಾರರು ಸಾವನ್ನಪ್ಪಿದ್ದಾರೆ. ಆದರೆ ಲೈಫ್ ಜಾಕೆಟ್ ವಿತರಣೆಯಲ್ಲಿ ಮಾತ್ರ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರಿದೆ ಎಂದು ಶ್ರೀ ಕಿಶೋರ್ ಕುಮಾರ್ ಅವರು ಅಂಕಿ-ಅಂಶಗಳ ಸಮೇತ ಸರ್ಕಾರದ ವಿರುದ್ಧ ಹರಿಹಾಯ್ದರು:

ಉತ್ತರ ಕನ್ನಡಕ್ಕೆ ಅನ್ಯಾಯ: 2025-26ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 57 ಮೀನುಗಾರರು ಸಾವನ್ನಪ್ಪಿದ್ದಾರೆ. ಆದರೆ ಆಘಾತಕಾರಿ ವಿಚಾರವೆಂದರೆ, ಇದೇ ವರ್ಷ ಸರ್ಕಾರ ಆ ಜಿಲ್ಲೆಗೆ ವಿತರಿಸಿದ ಲೈಫ್ ಜಾಕೆಟ್‌ಗಳ ಸಂಖ್ಯೆ ಶೂನ್ಯ (0)!

ದಕ್ಷಿಣ ಕನ್ನಡ (ಮಂಗಳೂರು) ನಿರ್ಲಕ್ಷ್ಯ: 2023-24 ಮತ್ತು 2024-25ನೇ ಸಾಲಿನಲ್ಲಿ ಮಂಗಳೂರು ಭಾಗದಲ್ಲಿ 08 ಮೀನುಗಾರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಎರಡೂ ವರ್ಷಗಳಲ್ಲಿ ಸರ್ಕಾರ ವಿತರಿಸಿದ ಲೈಫ್ ಜಾಕೆಟ್‌ಗಳ ಸಂಖ್ಯೆ ಶೂನ್ಯ (0).

ಉಡುಪಿ ಅಂಕ: ಕಳೆದ ಮೂರು ವರ್ಷಗಳಲ್ಲಿ ಉಡುಪಿಯಲ್ಲಿ 90 ಮೀನುಗಾರರು ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರ ಕೇವಲ ತಲಾ 180, 170 ಮತ್ತು 193 ಜಾಕೆಟ್‌ಗಳನ್ನು ಮಾತ್ರ ಹಂಚಿ ಕೈತೊಳೆದುಕೊಂಡಿದೆ.

"ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಲೈಫ್ ಜಾಕೆಟ್ ಕಡ್ಡಾಯ ಎಂದು ಆದೇಶ ಹೊರಡಿಸುವ ಸರ್ಕಾರ, ಅದೇ ಮೀನುಗಾರರಿಗೆ ರಕ್ಷಣಾ ಪರಿಕರಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಾವುಗಳು ಹೆಚ್ಚುತ್ತಿರುವ ಜಿಲ್ಲೆಗಳಿಗೇ ಲೈಫ್ ಜಾಕೆಟ್ ಕೊಡದೆ 'ಶೂನ್ಯ' ಸಾಧನೆ ಮಾಡಿರುವುದು ಮೀನುಗಾರರ ಜೀವಕ್ಕೆ ಬೆಲೆ ಇಲ್ಲ ಎಂಬುದನ್ನು ತೋರಿಸುತ್ತದೆ" ಎಂದು ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಕಾಗದದ ಮೇಲೆ 604 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಬದಲು, ತಕ್ಷಣವೇ ಕರಾವಳಿಯ ಮೂರೂ ಜಿಲ್ಲೆಗಳ ಮೀನುಗಾರರಿಗೆ ಅಗತ್ಯವಿರುವಷ್ಟು ಲೈಫ್ ಜಾಕೆಟ್‌ಗಳನ್ನು ಒದಗಿಸಬೇಕು. ಮೀನುಗಾರರ ಜೀವಕ್ಕೆ ಬೆಲೆ ಕೊಡುವುದನ್ನು ಸರ್ಕಾರ ಕಲಿಯಬೇಕು ಎಂದು ಅವರು ಸರ್ಕಾರವನ್ನು ಕಟುವಾಗಿ ಎಚ್ಚರಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!