ಮಂಗಳೂರು, ಆಗಸ್ಟ್ 21 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ಸ್ವರ್ಣಾ, ಸೀತಾ ಸೇರಿದಂತೆ ಪ್ರಮುಖ ನದಿಗಳಿಗೆ ಅಪಾಯಕಾರಿ ತ್ಯಾಜ್ಯವನ್ನು ಎಸೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ವಿಧಾನ ಪರಿಷತ್ತಿನಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 46 (64) ದಿನಾಂಕ: 17.08.2026 ರಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಪ್ರಶ್ನಿಸಿದ್ದರು.
ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ತಮ್ಮ ಸುದೀರ್ಘ ಉತ್ತರದಲ್ಲಿ ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಸಚಿವರು ನೀಡಿರುವ ಉತ್ತರದಲ್ಲಿ ಸರ್ಕಾರದಿಂದ ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಯಾವುದೇ ನೇರ ಕ್ರಮ ಕೈಗೊಂಡಿರುವುದನ್ನು ತಿಳಿಸಿಲ್ಲ. ಕೇವಲ ಹಸಿರು ನ್ಯಾಯಮಂಡಳಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಸರ್ಕಾರ ನೇರವಾಗಿ ಈ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಒತ್ತು ನೀಡಿಲ್ಲ ಎಂಬುದಾಗಿ ಕಿಶೋರ್ ಕುಮಾರ್ ಪುತ್ತೂರು ತಮ್ಮ ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನೀಡಿರುವ ವಿವರಣೆಗಳು:
ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುಪುರ (ಫಲ್ಗುಣಿ), ನಂದಿನಿ, ನೇತ್ರಾವತಿ ನದಿಗಳಿಗೆ ಸಂಸ್ಕರಿಸದ ಒಳಚರಂಡಿ ತ್ಯಾಜ್ಯ ಹರಿಸುತ್ತಿರುವ ಹಾಗೂ ಯುಜಿಡಿ (UGD) ಸರಿಯಾಗಿ ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಮಂಗಳೂರು ಪ್ರಾದೇಶಿಕ ಕಚೇರಿಗೆ ದೂರುಗಳು ಬಂದಿದ್ದವು. ನೋಟಿಸ್ ನೀಡಿದರೂ ಪಾಲಿಕೆಯಿಂದ ಅನುಪಾಲನೆ ಮಾಡದ ಕಾರಣ, ದಿನಾಂಕ: 08.12.2025 ರಂದು ಮಂಗಳೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ PRC No. 27/2025 ರಡಿ ಪಾಲಿಕೆಯ ಪ್ರಸ್ತುತ ಹಾಗೂ ಹಿಂದಿನ ಆಯುಕ್ತರ ವಿರುದ್ಧ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಸೌಪರ್ಣಿಕಾ ನದಿ ಮಾಲಿನ್ಯ (ಉಡುಪಿ): ಬೈಂದೂರು ತಾಲೂಕಿನ ಕೊಲ್ಲೂರಿನ ಸೌಪರ್ಣಿಕಾ ನದಿಗೆ ಸಂಸ್ಕರಿಸದ ತ್ಯಾಜ್ಯ ಹಾಗೂ ಸುತ್ತಮುತ್ತಲಿನ ಹೋಟೆಲ್, ಲಾಡ್ಜ್‌ಗಳ ಕಲುಷಿತ ನೀರನ್ನು ಬಿಡುತ್ತಿರುವ ಕುರಿತು ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ ಮೂಲ ಅರ್ಜಿ ಸಂಖ್ಯೆ: 125/2024 ರಲ್ಲಿ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಕ್ರಿಯಾ ಯೋಜನೆಯನ್ನು ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನುಷ್ಠಾನಕ್ಕಾಗಿ ಮೇಲ್ವಿಚಾರಣಾ ಸಮಿತಿ ಸಭೆಯನ್ನು ನಡೆಸಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ನದಿ ನೀರಿನ ಗುಣಮಟ್ಟ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೌಪರ್ಣಿಕಾ, ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುತ್ತಿದೆ. ಜುಲೈ ತಿಂಗಳ ವರದಿಯ ಪ್ರಕಾರ ಈ ನದಿಗಳ ನೀರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರ್ಗೀಕರಣದಂತೆ “ಬಿ” ವರ್ಗದಲ್ಲಿದೆ ಎಂದು ಉತ್ತರಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಶ್ರೀನಿವಾಸ ಕಾಲೇಜಿಗೆ ದಂಡದ ಶಿಫಾರಸು: ಸುರತ್ಕಲ್ ರೊಚ್ಚು ನೀರು ಸಂಸ್ಕರಣ ಘಟಕದ ಷರತ್ತು ಪಾಲಿಸದೆ ನದಿ ಮೂಲಗಳಿಗೆ ಸಂಸ್ಕರಿಸದ ನೀರು ಬಿಡುತ್ತಿರುವ ಕಾರಣ ಮಂಗಲೂರು ಮಹಾನಗರ ಪಾಲಿಕೆಗೆ ರೂ. 1986.695 ಲಕ್ಷ ಹಾಗೂ ಮುಕ್ಕಾದ ಶ್ರೀನಿವಾಸ ಕಾಲೇಜಿಗೆ ರೂ. 72.90 ಲಕ್ಷ ಪರಿಸರ ಪರಿಹಾರ ವಿಧಿಸಲು ಕೇಂದ್ರ ಕಛೇರಿಗೆ ಶಿಫಾರಸು ಮಾಡಲಾಗಿದೆ.
ಬಂಟ್ವಾಳ ಪುರಸಭೆ ವಿರುದ್ಧ ಕ್ರಮ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಸಂಸ್ಕರಿಸದ ಒಳಚರಂಡಿ ತ್ಯಾಜ್ಯ ಹರಿಸುತ್ತಿರುವ ಹಿನ್ನೆಲೆಯಲ್ಲಿ ಮಂಡಳಿಯಿಂದ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ. ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯಿದೆ 1974 ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಪರಿಸರ ಪರಿಹಾರ ವಿಧಿಸಲು ಕೇಂದ್ರ ಕಛೇರಿಗೆ ಶಿಫಾರಸು ಮಾಡಲಾಗಿದೆ.
ಕೈಗಾರಿಕಾ ತ್ಯಾಜ್ಯ ನಿಯಂತ್ರಣ: ಬೈಕಂಪಾಡಿ ಪ್ರದೇಶದಲ್ಲಿ ಫಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯ ಬಿಡುತ್ತಿರುವ ನಿಯಮ ಉಲ್ಲಂಘಿಸಿದ 06 ಕೈಗಾರಿಕೆಗಳಿಗೆ ಪರಿಸರ ಪರಿಹಾರ ವಿಧಿಸಿ ಡಿಮಾಂಡ್ ನೋಟಿಸ್ ನೀಡಲಾಗಿದೆ. ಅಲ್ಲದೆ, 2024-25 ನೇ ಸಾಲಿನಲ್ಲಿ ಹಾಗೂ 2025-26 ನೇ ಸಾಲಿನಲ್ಲಿ ನಿಯಮ ಪಾಲಿಸದ ಕೈಗಾರಿಕೆಗಳಿಗೆ ಮುಚ್ಚುವ ಆದೇಶ (Closure Order) ನೀಡಲು ಶಿಫಾರಸು ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಉತ್ತರಿಸಿದೆ.
ಸದಸ್ಯರ ಆಗ್ರಹ: ನದಿಗಳಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಸಂಬಂಧಿಸಿದ ಇಲಾಖೆ ಅಥವಾ ಸರ್ಕಾರವು ಇದುವರೆಗೆ ಯಾವುದೇ ನೇರ ಕಠಿಣ ಕ್ರಮ ಕೈಗೊಂಡಿಲ್ಲ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ, ಕೂಡಲೇ ಅಗತ್ಯ ಸುತ್ತೋಲೆಗಳ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ.