ಮಂಗಳೂರು, ಆಗಸ್ಟ್ 05 : ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬಯಿನ ಅಂಧೇರಿ ವೆಸ್ಟ್ ನಿವಾಸಿ ಅಶೋಕ್ ನಾರಾಯಣ್ (63) ಬಂಧಿತ ಆರೋಪಿ, ಪ್ರಕರಣ ವಿವರ: ಈತನ ವಿರುದ್ಧ 2019ರಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಪ್ರಕರಣ ದಾಖಲಾದ ದಿನದಿಂದ ಬಂಧನಕ್ಕೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ. ವಿಳಾಸ ಬದಲಾಯಿಸಿದ್ದ ಈತನ ವಿರುದ್ಧ ತಲೆಮರೆಸಿಕೊಂಡಿರುವ ಆರೋಪ ಪಟ್ಟಿ ಹಾಕಲಾಗಿತ್ತು.
ತನಿಖೆ ವೇಳೆ ಈತ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ತಿಳಿದು ಪಾಸ್‌ಪೋರ್ಟ್ ವಿವರವನ್ನು ಪಡೆದು ಪೊಲೀಸ್ ಆಯುಕ್ತರ ಕಚೇರಿ ಮೂಲಕ ಎಲ್ ಒಸಿ ಹೊರಡಿಸ ಲಾಗಿತ್ತು. ಆ.1ರಂದು ವಿದೇಶದಿಂದ ಭಾರತಕ್ಕೆ ಬಂದ ಸಂದರ್ಭದಲ್ಲಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ.
ಆ.2ರಂದು ಕಂಕನಾಡಿ ನಗರ ಠಾಣಾ ಸಿಬ್ಬಂದಿ ಎಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ರವಿಕುಮಾರ್ ಅವರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.