ಮಂಗಳೂರು,ಆಗಸ್ಟ್ 21 : ಕರಾವಳಿಯ ಜನರ ದಶಕಗಳ ಸುದೀರ್ಘ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಮಂಗಳೂರಿನ ರೈಲ್ವೆ ಜಾಲವನ್ನು ಕೇರಳದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ, ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.
ಈ ಮಹತ್ವದ ನಿರ್ಧಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಕರಾವಳಿಯ ಜನರ ಈ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ನಿರಂತರವಾಗಿ ಪ್ರಯತ್ನಿಸಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ತಂದು, ಸಂಸತ್ತು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಿದ್ದರು. ಅವರ ಈ ನಿರಂತರ ಪರಿಶ್ರಮ ಮತ್ತು ಬದ್ಧತೆಗೆ ಸತೀಶ್ ಕುಂಪಲ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ತ್ವರಿತ ಕ್ರಮ ಕೈಗೊಂಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕರಾವಳಿಯ ಅಭಿವೃದ್ಧಿಗೆ ನೀಡಿರುವ ಆದ್ಯತೆಗೆ ಧನ್ಯವಾದ ತಿಳಿಸಿರುವ ಸತೀಶ್ ಕುಂಪಲ, ಈ ಆಡಳಿತಾತ್ಮಕ ಏಕೀಕರಣದಿಂದ ಮಂಗಳೂರಿನ ರೈಲ್ವೆ ಸೇವೆಗಳ ಸಮನ್ವಯತೆ ಹೆಚ್ಚಲಿದೆ ಎಂದಿದ್ದಾರೆ. ಪ್ರಯಾಣಿಕರ ಸಮಸ್ಯೆಗಳ ಶೀಘ್ರ ಪರಿಹಾರ, ರೈಲ್ವೆ ಮೂಲಸೌಕರ್ಯಗಳ ವಿಸ್ತರಣೆ ಹಾಗೂ ಕರಾವಳಿಯ ಸಂಪರ್ಕ ವ್ಯವಸ್ಥೆಯ ಮತ್ತಷ್ಟು ಅಭಿವೃದ್ಧಿಗೆ ಈ ನಿರ್ಧಾರದಿಂದ ಹೊಸ ವೇಗ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
