BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರಿನಲ್ಲೊಂದು ಪೈಶಾಚಿಕ ಕೃತ್ಯ, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಬೈಕ್ ರೈಡರ್ ನಿಂದ ಯುವತಿಯ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್‌- ಆರೋಪಿ ಬಂಧನ..!


ಮಂಗಳೂರು, ಆಗಸ್ಟ್ 03 : ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಬೈಕ್ ರೈಡರ್  ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹಣ ಹಾಗೂ ಆಕೆಯ ಫೋನ್ ಪಡೆದು ಬ್ಲ್ಯಾಕ್ಮೇಲ್ ಮಾಡಿರುವ  ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಮೂಲದ 27 ವರ್ಷದ ಸಂತ್ರಸ್ಥೆ ನೀಡಿದ ದೂರಿನ ಮೇರೆಗೆ,  ಬಜಪೆಯ ಬೈಕ್ ರೈಡರ್ ಕಾರ್ತಿಕ್ ಕರ್ಕೇರ ಎಂಬಾತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64, 78, 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ದೂರಿನ ಸಾರಾಂಶ:

2026ರ ಫೆಬ್ರವರಿಯಲ್ಲಿ ಯುವತಿ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದಾಗ ಇನ್ ಸ್ಟಾಗ್ರಾಂ ಮೂಲಕ ಕಾರ್ತಿಕ್ ಪರಿಚಯವಾಗಿದ್ದ. ಈ ಸಂದರ್ಭ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಆತ, ಅರೆನಗ್ನ ಫೋಟೊ ಕೇಳಿದ್ದರಿಂದ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಆ ಬಳಿಕ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಫೋಟೊ ಕಳುಹಿಸಿ, ಗಾಂಜಾ ಸೇವಿಸುವುದಾಗಿ ಹೇಳಿ ಭಯ ಹುಟ್ಟಿಸಿ ಮತ್ತೆ ಸಂಪರ್ಕಕ್ಕೆ ಬರುವಂತೆ ಮಾಡಿದ್ದ. ಯುವತಿ ಒಮಾನ್ ನಿಂದ ಮರಳಿದ ಬಳಿಕ, ಮೇ 10ರಂದು ಭೇಟಿಯಾಗಿದ್ದರು. ಅದೇ ವೇಳೆ ಭಾರತ್ ಮಹಲ್ ಸಮೀಪ ಕಾರ್ತಿಕ್ ಚಲಾಯಿಸುತ್ತಿದ್ದ ಬೈಕ್‌ನ ಅತಿಯಾದ ಶಬ್ದದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಡೆದಿದ್ದರು. ಪೊಲೀಸರು ನಿಲ್ಲಿಸುವಂತೆ ಸೂಚಿಸಿದರೂ ಆತ ವಾಹನ ನಿಲ್ಲಿಸದೆ ತೆರಳಿದ್ದರಿಂದ ಠಾಣೆಗೆ ಕರೆದುಕೊಂಡು ಹೋಗಿ ದಂಡ ವಿಧಿಸಲಾಗಿತ್ತು. ದಂಡ ಪಾವತಿಸಿ ಹೊರಬರುವಾಗ ರಾತ್ರಿ ಸುಮಾರು 1 ಗಂಟೆಯಾಗಿದ್ದರಿಂದ ಲಾಡ್ಜ್ ನಲ್ಲಿ ಉಳಿಯುವಂತೆ ಒತ್ತಾಯಿಸಿದ್ದನು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಲಾಡ್ಜ್‌ ನಲ್ಲಿ ತಾವು ಮದ್ಯ ಸೇವಿಸಿದ್ದನ್ನು ಗಮನಿಸಿ, ನಿದ್ರೆಯಲ್ಲಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆಯ ಬಳಿಕ ಕಾರ್ತಿಕ್‌ನಿಂದ ದೂರ ಉಳಿದರೂ ಆತ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಕೇಳುತ್ತಿದ್ದನು. ಬಳಿಕ ಮೊಬೈಲ್ ಫೋನ್ ಕೊಡದಿದ್ದರೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕಿದ್ದರಿಂದ ಮೇ 12ರಂದು ಐಫೋನ್ ಖರೀದಿಸಿ ನೀಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದಾದ ಬಳಿಕವೂ ತನ್ನೊಂದಿಗೆ ಇರಬೇಕೆಂದು ಒತ್ತಾಯಿಸುತ್ತಲೇ ಇದ್ದನು. ಈ ಮಧ್ಯೆ ಯುವತಿಗೆ ಬೇರೆ ವಿವಾಹ ಸಂಬಂಧ ನಿಶ್ಚಯವಾಗಿತ್ತು. ಈ ವಿಷಯ ತಿಳಿಸಿದಾಗ ಮದುವೆಯಾಗಲಿರುವ ಯುವಕನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೂ ನಿಂದನಾತ್ಮಕ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಾನ್ಫರೆನ್ಸ್ ಕರೆ ವೇಳೆ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಕಾರ್ತಿಕ್‌ಗೆ ನೀಡಿದ್ದ ಐಫೋನ್ ಅನ್ನು ವಾಪಸ್ ಪಡೆದುಕೊಂಡರೂ ಅದರ ಪಾಸ್‌ವರ್ಡ್ ನೀಡಿರಲಿಲ್ಲ. ಪಾಸ್‌ವರ್ಡ್ ಕೇಳಲು ಕರೆ ಮಾಡಿದಾಗ ಕಾರ್ತಿಕ್‌ನ ಸೋದರ ಸಂಬಂಧಿ  ಕರೆ ಸ್ವೀಕರಿಸಿ, ತನಗೂ ತಾನು ಮದುವೆಯಾಗಲಿರುವ ಯುವಕನಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾಳೆ ಎಂದು ಯುವತಿ ಆರೋಪಿಸಿದ್ದಾರೆ. ಇದಲ್ಲದೆ, ಕಾರ್ತಿಕ್ ವಾಟ್ಸಾಪ್ ಮೂಲಕ ಎರಡು–ಮೂರು ಖಾಸಗಿ ವಿಡಿಯೊ ಹಾಗೂ ಫೋಟೊಗಳನ್ನು ಕಳುಹಿಸಿ, "ನೀನು ಹೇಗೆ ಮದುವೆಯಾಗುತ್ತೀಯೋ ನೋಡುತ್ತೇನೆ. ನಿಮ್ಮಿಬ್ಬರನ್ನೂ ಬೇರ್ಪಡಿಸುತ್ತೇನೆ. ಈ ಫೋಟೊಗಳನ್ನು ಪತ್ರಿಕೆಯಲ್ಲಿ ಪ್ರಕಟವಾಗುವಂತೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಕಾರ್ತಿಕ್ ತನ್ನನ್ನು ಹಿಂಬಾಲಿಸಿ ನಿರಂತರ ಕಿರುಕುಳ ನೀಡುತ್ತಿದ್ದು, ತನಗೂ ಹಾಗೂ ತಾನು ಮದುವೆಯಾಗಲಿರುವ ಯುವಕನಿಗೂ ಜೀವ ಬೆದರಿಕೆ ಇದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಮಂಗಳೂರು ಮಹಿಳಾ ಠಾಣೆ ಪೊಲೀಸರು ಆರೋಪಿ ಕಾರ್ತಿಕ್ ನನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!