ಮಂಗಳೂರು,ಆಗಸ್ಟ್ 24: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಕೊಲೆ ಯತ್ನವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿದ್ದು ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಆಗ್ರಹಿಸಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವರನ್ನು ತಡೆದು ಗೋವುಗಳನ್ನು ರಕ್ಷಿಸಲು ಮುಂದಾದ ಗೋರಕ್ಷಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ (ದಕ್ಷಿಣ ಕನ್ನಡ ಜಿಲ್ಲೆ) ತೀವ್ರವಾಗಿ ಖಂಡಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ಆಗಸ್ಟ್ 15, 2026 ರಂದು ಶಿಕಾರಿಪುರ ತಾಲೂಕಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ವಧೆಗೆ ಸಾಗಿಸುತ್ತಿದ್ದ ವಾಹನವನ್ನು ತಡೆದು ರಕ್ಷಿಸಲು ಯತ್ನಿಸಿದ ಗೋರಕ್ಷಕರ ಮೇಲೆ ಪೂರ್ವನಿಯೋಜಿತವಾಗಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಲಾಗಿದೆ. ಅಲ್ಲದೆ, ವಾಹನವನ್ನು ಧ್ವಂಸಗೊಳಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಕಾಯ್ದೆ ಜಾರಿಯಲ್ಲಿದ್ದರೂ ಪರವಾನಗಿ ಇಲ್ಲದೆ ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆಗಳು ನಡೆಯುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.
ಗೋರಕ್ಷಕರ ಮೇಲೆ ಕೊಲೆ ಯತ್ನ ನಡೆಸಿದ ಎಲ್ಲಾ ಆರೋಪಿಗಳು ಹಾಗೂ ಸಂಚುಕೋರರನ್ನು ತಕ್ಷಣವೇ ಬಂಧಿಸಿ, ಜಾಮೀನು ರಹಿತ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು.
ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ 2020ರ ಸೆಕ್ಷನ್ 8ರ ಪ್ರಕಾರ, ಅಕ್ರಮ ಗೋಕಳ್ಳತನ ಹಾಗೂ ಕಸಾಯಿಖಾನೆ ನಡೆಸುತ್ತಿರುವ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
ರಾಜ್ಯದಾದ್ಯಂತ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿರುವ ಎಲ್ಲಾ ಕಸಾಯಿಖಾನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ಸಂಪೂರ್ಣವಾಗಿ ಬಂದ್ ಮಾಡಿಸಬೇಕು.
ಅಕ್ರಮ ಗೋಸಾಗಾಟ ತಡೆಯಲು ಸೂಕ್ಷ್ಮ ಪ್ರದೇಶಗಳು ಮತ್ತು ಗಡಿ ಭಾಗಗಳಲ್ಲಿ ಪೊಲೀಸ್ ರಾತ್ರಿ ಗಸ್ತು ಹೆಚ್ಚಿಸಬೇಕು ಹಾಗೂ ಸಿಸಿಟಿವಿ ಅಳವಡಿಸಿದ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಬೇಕು.
ಸರ್ಕಾರವು ಈ ಹೇಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ಮಹಾನಗರ ಕಾರ್ಯಾಧ್ಯಕ್ಷ ಮನೋಹರ್ ಸುವರ್ಣ ಮತ್ತು ಮಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್ ಎಚ್ಚರಿಸಿದ್ದಾರೆ.