ಮಂಗಳೂರು,ಆಗಸ್ಟ್ 31: ಮೊಬೈಲ್ ವಿಚಾರವಾಗಿ ಉಂಟಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಕುಡಿತದ ನಶೆಯಲ್ಲಿ ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಮಂಗಳೂರು ನಗರದ ಕೊಟ್ಟಾರ ಕ್ರಾಸ್ ಬಳಿ ರವಿವಾರ (ಆ.30) ತಡರಾತ್ರಿ ನಡೆದಿದೆ.
ಅಡಿವೆಪ್ಪ (40) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿರುವ ಅವರ ತಮ್ಮ ರಾಜು (36) ಕೊಲೆ ಆರೋಪಿಯಾಗಿದ್ದು ಕೃತ್ಯದ ಬಳಿಕ ಪರಾರಿಯಾಗಿದ್ದಾನೆ.
ಹಿನ್ನೆಲೆ ಮತ್ತು ಘಟನೆಯ ವಿವರ:
ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲದವರಾದ ಈ ಕುಟುಂಬವು ಕೊಟ್ಟಾರ ಕ್ರಾಸ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಮನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು (ಅಡಿವೆಪ್ಪ ಮತ್ತು ರಾಜು) ಇದ್ದರು. ತಾಯಿ ಸಣ್ಣ ಗೂಡಂಗಡಿ ನಡೆಸಿ ಕುಟುಂಬ ನಿರ್ವಹಿಸುತ್ತಿದ್ದರೆ, ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಣ್ಣ-ತಮ್ಮಂದಿರಿಬ್ಬರೂ ವಿಪರೀತ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ. ರವಿವಾರ ರಾತ್ರಿ 10:30 ರಿಂದ 11:00 ಗಂಟೆಯ ಮಧ್ಯೆ ಮೊಬೈಲ್ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳ ಹಾಗೂ ಹೊದಾಟ ನಡೆದಿದೆ. ಈ ವೇಳೆ ಕುಡಿತದ ಅಮಲಿನಲ್ಲಿದ್ದ ತಮ್ಮ ರಾಜು ಚಾಕುವಿನಿಂದ ಅಡಿವೆಪ್ಪನಿಗೆ ಇರಿದಿದ್ದಾನೆ.
ತಾಯಿಗೆ ಕಾದಿತ್ತು ಆಘಾತ:
ರಾತ್ರಿ ಅಂಗಡಿ ಮುಚ್ಚಿ ಮನೆಗೆ ವಾಸಸ್ಥಳಕ್ಕೆ ಬಂದ ತಾಯಿಗೆ ಮಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಗಾಯಾಳುವನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೈದು ತಲೆಮರೆಸಿಕೊಂಡಿರುವ ತಮ್ಮ ರಾಜುವಿನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಮುಂದುವರಿಸಿದ್ದಾರೆ.
.jpeg)