BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru Landslide ಮಂಗಳೂರು ವಾಮಂಜೂರು ಕೆತ್ತಿಕಲ್‌ನಲ್ಲಿ ಭಾರಿ ಭೂ ಕುಸಿತ, ಸಂಪರ್ಕ ಕಡಿತದ ಭೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 169...!


ಮಂಗಳೂರು, ಆಗಸ್ಟ್ 05 : ನಿರಂತರ ಮಳೆಯಿಂದಾಗಿ ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಮತ್ತೆ ಭಾರಿ ಭೂಕುಸಿತವಾಗುತ್ತಿದ್ದು ಆತಂಕ ಸೃಷ್ಟಿಸಿದೆ. ಪ್ರತಿ ಬಾರಿ ಮಳೆಗಾಲದಲ್ಲೇ ಅಪಾಯಕಾರಿಯಾಗಿ ಗುಡ್ಡ ಕುಸಿಯುತ್ತಿದ್ದು,ಇದಕ್ಕೆ ಸೂಕ್ತ  ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಲಂಬಾಕೃತಿಯಲ್ಲಿ ಅಗೆದಿರುವುದೇ ಕುಸಿತಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ169ರ ರಸ್ತೆಯಲ್ಲಿ ಕೆತ್ತಿರಲ್ ಗುಡ್ಡ ಪ್ರದೇಶದಲ್ಲಿ ರಸ್ತೆ ಕುಸಿಯುವುದು ಪೂರ್ವ ನಿರ್ಧರಿತವೇ ಆಗಿದೆಯಾದರೂ ಹೆದ್ದಾರಿ ನಿರ್ಮಾಣ ಇಲಾಖೆಯು ಆ ಜಾಗದ ಮಣ್ಣಿನ ಗಟ್ಟಿತನವನ್ನಾಗಲಿ,ಮೆದುತನವನ್ನಾಗಲಿ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡದೆ ಇರುವುದರಿಂದ ಪ್ರತೀ ಮಳೆಗಾಲದಲ್ಲಿಯೂ ಅಲ್ಲಿ ರಸ್ತೆ ಕುಸಿತವಾಗುತ್ತಿರುತ್ತದೆ ಎಂದು ಸ್ಥಳೀಯರ ಆರೋಪವಾಗಿದೆ. 

 ಇದೀಗ ಹೆದ್ದಾರಿ ನಿರ್ಮಾಣ ಮಾಡುತ್ತಿರುವಾಗ ಅಲ್ಲಿ ಹೇಗೆ ಮಾಡಿದರೂ ಗುಡ್ಡ ಕುಸಿತ ನಿಲ್ಲುತ್ತಿಲ್ಲ. ಈ ಭಾಗದಲ್ಲಿ ಸತತ ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಕೆಳಭಾಗದಲ್ಲಿರುವ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗುಡ್ಡೆಯ ಸನಿಹದಲ್ಲಿರುವ ತಿರುವೈಲು ಸರ್ಕಾರಿ ಶಾಲೆಯ ಸಮೀಪವಿರುವ ಕೆತ್ತಿಕಲ್ ಗುಡ್ಡದಿಂದ ಮಣ್ಣು ಹಾಗೂ ಬೃಹತ್ ಬಂಡೆಕಲ್ಲುಗಳು ಹೆದ್ದಾರಿಯತ್ತ ಜಾರಲಾರಂಭಿಸಿವೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಗುಡ್ಡದ ಮಣ್ಣು ಸಡಿಲಗೊಂಡಿದ್ದು, ಕುಸಿತದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ವ್ಯಕ್ತವಾಗಿದೆ.

ಈ ಪ್ರದೇಶದಲ್ಲಿ ಹೆದ್ದಾರಿ ಗುತ್ತಿಗೆ ಸಂಸ್ಥೆ ಕಳೆದ ಒಂದು ತಿಂಗಳಿನಿಂದ ಗುಡ್ಡದ ತಳಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಗುಡ್ಡದ ಸುರಕ್ಷತೆಗಾಗಿ ಈ ಕಾಮಗಾರಿ ಕೈಗೊಳ್ಳಲಾಗಿದ್ದರೂ, ಭಾರೀ ಮಳೆಯ ಸಂದರ್ಭದಲ್ಲಿ ಇಂತಹ ತಡೆಗೋಡೆಗಳು ಸಾಕಷ್ಟು ಪರಿಣಾಮಕಾರಿಯಾಗುವುದಿಲ್ಲ ಎಂಬ ಆತಂಕವನ್ನು ಸ್ಥಳೀಯರು ಮೊದಲಿನಿಂದಲೇ ವ್ಯಕ್ತಪಡಿಸಿದ್ದರು. ಇದೀಗ ನಡೆಯುತ್ತಿರುವ ಬೆಳವಣಿಗೆಗಳು ಅವರ ಆತಂಕಕ್ಕೆ ಪುಷ್ಟಿ ನೀಡುವಂತಿವೆ. ಕಳೆದ ವರ್ಷವೂ ಇದೇ ಕೆತ್ತಿಕಲ್ ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿತ್ತು. ಬಳಿಕ ಗುಡ್ಡವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿಮೆಂಟ್ ಹೊದಿಕೆ ಅಳವಡಿಸಲಾಗಿತ್ತು. ಮಳೆ ನೀರು ಗುಡ್ಡದೊಳಗೆ ಸೇರುವುದನ್ನು ತಡೆಯಲು ನೂರಾರು ಡ್ರೈನೇಜ್ ಕೊಳವೆಗಳನ್ನು ಅಳವಡಿಸುವ ಕಾಮಗಾರಿಯೂ ನಡೆದಿತ್ತು. ಆದರೆ ಕಳೆದ ವರ್ಷದ ಭಾರೀ ಮಳೆಯ ಅಬ್ಬರಕ್ಕೆ ಆ ರಕ್ಷಣಾ ವ್ಯವಸ್ಥೆಯ ಬಹುಪಾಲು ಹಾನಿಗೊಳಗಾಗಿತ್ತು. ಈ ಬಾರಿ ಗುಡ್ಡ ಕುಸಿದಿರುವ ಭಾಗದಲ್ಲಿ ಹೆದ್ದಾರಿ ಮತ್ತು ಗುಡ್ಡದ ಮಧ್ಯೆ ಹೊಸ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ ತಜ್ಞರ ಪ್ರಕಾರ, ಅಡಿಪಾಯ ಆಳವಾಗಿರದ ಕಾರಣ ಭಾರೀ ಮಳೆಯ ಸಂದರ್ಭದಲ್ಲಿ ಕೆಳಭಾಗದ ಮಣ್ಣು ಸಡಿಲಗೊಂಡರೆ ಮೇಲ್ಭಾಗದಲ್ಲಿರುವ ಬಂಡೆಗಳು ಸುಲಭವಾಗಿ ಜಾರುವ ಅಪಾಯವಿದೆ.

ಪ್ರಸ್ತುತ ಗುಡ್ಡದ ಮೇಲ್ಭಾಗದಲ್ಲಿ ಇನ್ನೂ ಹಲವು ಬೃಹತ್ ಬಂಡೆಗಳು ಹಾಗೂ ದೊಡ್ಡ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಂಡರೆ ಅವು ಕುಸಿದು ಹೆದ್ದಾರಿಗೆ ಬೀಳುವ ಸಾಧ್ಯತೆ ಇರುವುದರಿಂದ ಸಂಚಾರಕ್ಕೆ ದೊಡ್ಡ ಅಪಾಯ ಎದುರಾಗಲಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಇಲ್ಲವಾದಲ್ಲಿ ಕೆತ್ತಿಕಲ್ ಮತ್ತೊಂದು ಕೇರಳದ ವಯನಾಡು ಆಗುವುದರಲ್ಲಿ ಸಂಶಯವಿಲ್ಲ.

https://youtu.be/7zknDELMTQ8

 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!