ಮಂಗಳೂರು, ಆಗಸ್ಟ್ 23 : ಮಂಗಳೂರಿನಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ವೊಂದು ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಸ್ಥಳೀಯ ಮೀನುಗಾರರ ಸಮಯಪ್ರಜ್ಞೆಯಿಂದ ಬೋಟಿನಲ್ಲಿದ್ದ ಆರೂ ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಟ್ವಾಳ ತಾಲೂಕಿನ ನಿವಾಸಿ ಇಬ್ರಾಹಿಂ ಖಲೀಲ್ ಮೂಸಾ ಅವರಿಗೆ ಸೇರಿದ ‘ಅಯಾನ್’ ಹೆಸರಿನ 15.100 ಮೀಟರ್ ಉದ್ದದ ಟ್ರಾಲರ್ ಬೋಟ್ ಶನಿವಾರ ಸಂಜೆ ಮಂಗಳೂರು ದಕ್ಕೆಯಿಂದ 'ಕರೆ ಫಿಶಿಂಗ್'ಗಾಗಿ ಮೀನುಗಾರಿಕೆಗೆ ತೆರಳಿತ್ತು. ಆದರೆ ಬೋಟ್ ಅಳಿವೆಬಾಗಿಲನ್ನು ಸ್ವಲ್ಪವೇ ದಾಟುತ್ತಿದ್ದಂತೆ ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಅಲೆಗಳ ಅಬ್ಬರ ತೀವ್ರಗೊಂಡಿದೆ. ಪರಿಣಾಮವಾಗಿ ಬೋಟ್ ನಿಯಂತ್ರಣ ಕಳೆದುಕೊಂಡು ಸಮುದ್ರದಲ್ಲಿ ಮುಳುಗಡೆಯಾಗಲು ಆರಂಭಿಸಿದೆ. ಬೋಟಿನ ಮುಂಭಾಗ ಮಾತ್ರ ನೀರಿನ ಮೇಲೆ ತೇಲುತ್ತಾ ಮುಳುಗಡೆಯಾಗುತ್ತಿರುವ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೋಟ್ ಮುಳುಗುತ್ತಿದ್ದಂತೆ ಅದರಲ್ಲಿದ್ದ 6 ಮಂದಿ ಸಿಬ್ಬಂದಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಈ ವೇಳೆ ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು, ಹಗ್ಗ ಹಾಗೂ ರಕ್ಷಣಾ ಸಾಧನಗಳನ್ನು ಬಳಸಿ ಆರೂ ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ತಮ್ಮ ಬೋಟಿಗೆ ಎತ್ತಿಕೊಂಡು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ., "ಮಂಗಳೂರು ದಕ್ಕೆಯಿಂದ ಹೊರಟಿದ್ದ 'ಅಯಾನ್' ಬೋಟ್ ಅಳಿವೆಬಾಗಿಲು ದಾಟುತ್ತಿದ್ದಂತೆ ಗಾಳಿಯ ವೇಗ ಹೆಚ್ಚಾಗಿ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ನಮ್ಮ ಸ್ಥಳೀಯ ಮೀನುಗಾರರು ತಕ್ಷಣ ರಕ್ಷಿಸಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.