ಮಂಗಳೂರು, ಆಗಸ್ಟ್ 05 : ಮಂಗಳೂರಿನಲ್ಲಿ 66 ವರ್ಷದ ವೃದ್ದನಿಗೆ ಡಿಜಿಟಲ್ ಅರೆಸ್ಟ್ ಮಾಡಿ 34.48 ಲಕ್ಷ ರೂ. ಆನ್ ಲೈನ್ ವಂಚನೆ ಮಾಡಿದ ಘಟನೆ ನಡೆದಿದ್ದು ಈ ಸಂಬಂಧ ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಪ್ರೀಂ ಕೋರ್ಟ್ ಅರೆಸ್ಟ್ ವಾರೆಂಟ್ ಹಾಗೂ 'ಡಾಟಾ ಪ್ರೊಟೆಕ್ಷನ್ ಬೋರ್ಡ್' ಅಧಿಕಾರಿ ಎಂದು ಹೆಸರು ಹೇಳಿ ವೃದ್ದನಿಗೆ ಡಿಜಿಟಲ್ ಅರೆಸ್ಟ್ ಮಾಡುವ ಬೆದರಿಕೆಯೊಡ್ಡಿ ಬರೋಬ್ಬರಿ 34.48 ಲಕ್ಷ ರೂಪಾಯಿ ದೋಚಿದ್ದಾರೆ ಎನ್ನಲಾಗಿದೆ.
ಹಣಕಳಕೊಂಡ ಸಂತ್ರಸ್ಥರಿಗೆ ಜುಲೈ 10 ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತ್ತು. ತಾನು 'ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ'ದ ಅಧಿಕಾರಿ ಅಮನ್ ಕುಮಾರ್ ಶರ್ಮ ಎಂದು ಪರಿಚಯಿಸಿಕೊಂಡ ವ್ಯಕ್ತಿ, "ನಿಮ್ಮ ಗುರುತಿನ ಚೀಟಿ ಬಳಸಿ ಅಪರಿಚಿತರು ಸಿಮ್ ಕಾರ್ಡ್ ಪಡೆದು ಅಕ್ರಮ ಎಸಗಿದ್ದಾರೆ. ಇದನ್ನು ರದ್ದುಪಡಿಸಲು ಮುಂಬೈನ ಕೊಲಬಾ ಪೊಲೀಸ್ ಠಾಣೆಗೆ ಮಾತನಾಡಿ" ಎಂದು ಹೇಳಿ ಲೈನ್ ಕನೆಕ್ಟ್ ಮಾಡಿದ್ದಾನೆ.
ನಂತರ ಕೊಲಬಾ ಪೊಲೀಸ್ ಹೆಸರಿನಲ್ಲಿ ಮಾತನಾಡಿದ ವಂಚಕರು, ದೂರುದಾರರ ಐಡಿ ಬಳಸಿ ಒ. ಎಂ. ಅಬ್ದುಲ್ ಸಲಾಮ್ ಎಂಬಾತ ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದಿದ್ದು, ಅದಕ್ಕೆ 2 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಅದರಲ್ಲಿ ನಿಮಗೆ 20 ಲಕ್ಷ ರೂ. ಕಮಿಷನ್ ಬಂದಿದೆ. ಈ ಸಂಬಂಧ ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ನಿಂದ 'ಅರೆಸ್ಟ್ ವಾರೆಂಟ್' ಜಾರಿಯಾಗಿದೆ ಎಂದು ಹೆದರಿಸಿದ್ದಾರೆ.
ಬಂಧನದಿಂದ ಬಚಾವ್ ಆಗಬೇಕಾದರೆ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಆರ್ಬಿಐ(RBI) ಖಾತೆಗೆ ವರ್ಗಾಯಿಸಬೇಕು, ತಪಾಸಣೆ ಮುಗಿದ ಬಳಿಕ ಹಣ ವಾಪಸ್ ನೀಡಲಾಗುವುದು ಎಂದು ನಂಬಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ದೂರುದಾರರು ಜುಲೈ 12 ರಿಂದ ಜುಲೈ 27ರ ಅವಧಿಯಲ್ಲಿ ಹಂತ ಹಂತವಾಗಿ RTGS ಮೂಲಕ ಒಟ್ಟು 34,48,094/- ರೂಪಾಯಿಗಳನ್ನು ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಎರಡು ದಿನಗಳಲ್ಲಿ ಹಣ ವಾಪಸ್ ನೀಡುವುದಾಗಿ ಹೇಳಿದ್ದ ವಂಚಕರು ನಾಲ್ಕು ದಿನಗಳಾದರೂ ಹಣ ಹಿಂತಿರುಗಿಸದೆ, ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ಅನುಮಾನಗೊಂಡು ಪರಿಚಯಸ್ಥರ ಬಳಿ ವಿಷಯ ತಿಳಿಸಿದಾಗ ತಾವು 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ಆನ್ಲೈನ್ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಸಂತ್ರಸ್ತರು ನೀಡಿದ ದೂರಿನನ್ವಯ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಳ್ಳಲಾಗಿದೆ.