ಮಂಗಳೂರು, ಆಗಸ್ಟ್ 27: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿ ವೃದ್ಧೆಯೊಬ್ಬರ ಗಂಭೀರ ಅಪಘಾತಕ್ಕೆ ಕಾರಣವಾದ ಪ್ರಕರಣದಲ್ಲಿ, ಮಂಗಳೂರಿನ ನ್ಯಾಯಾಲಯವು ಬಸ್ ಚಾಲಕ ಹಾಗೂ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಚಾಲಕ ನಿಶಿತ್ ಶೆಟ್ಟಿ ಹಾಗೂ ಬಸ್ ಮಾಲೀಕ ಪ್ರೀತಂ ದೇವೇಂದ್ರ ಕುಲಾಲ್ ಶಿಕ್ಷೆಗೆ ಒಳಗಾದವರು.
ಘಟನೆಯ ಹಿನ್ನೆಲೆ
ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂದೂರ್‌ವೆಲ್ ಜಂಕ್ಷನ್‌ನಲ್ಲಿ 2024ರ ಜುಲೈ 10ರಂದು ಈ ದುರ್ಘಟನೆ ನಡೆದಿತ್ತು.
ಸುಂದರಿ (66) ಎಂಬವರು ಶಕ್ತಿನಗರಕ್ಕೆ ಹೋಗಲು ಬಸ್ ಹತ್ತಲು ರಸ್ತೆ ದಾಟುತ್ತಿದ್ದ ವೇಳೆ, ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಯ ಸಾಗುತ್ತಿದ್ದ ನಿಶಿತ್ ಶೆಟ್ಟಿ ಚಲಾಯಿಸಿಕೊಂಡು ಬಂದ ಬಸ್ ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸುಂದರಿ ಅವರು ರಸ್ತೆಗೆ ಬಿದ್ದು, ಬಸ್‌ನ ಎದುರಿನ ಚಕ್ರ ಅವರ ಬಲಕಾಲಿನ ಮೇಲೆ ಹರಿದು ತೀವ್ರ ಸ್ವರೂಪದ ಗಾಯವಾಗಿತ್ತು. ಈ ಕುರಿತು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯಲ್ಲಿ ಬಯಲಾದ ಅಕ್ರಮ
ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಬೆಚ್ಚಿಬೀಳಿಸುವ ಸಂಗತಿಯೊಂದು ಬೆಳಕಿಗೆ ಬಂದಿತ್ತು. ಆರೋಪಿ ಚಾಲಕ ಯಾವುದೇ ರೀತಿಯ ಚಾಲನಾ ಅನುಜ್ಞಾಪತ್ರ (Driving Licence) ಇಲ್ಲದೆ ಬಸ್ ಚಲಾಯಿಸಿರುವುದು ತನಿಖೆಯಿಂದ ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ, ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಹಾಗೂ ಸೂಕ್ತ ದಾಖಲೆ ಅಥವಾ ಪರವಾನಗಿ ಇಲ್ಲದ ವ್ಯಕ್ತಿಗೆ ಬಸ್ ಚಲಾಯಿಸಲು ಅವಕಾಶ ಮಾಡಿಕೊಟ್ಟ ಮಾಲೀಕನ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷಾ ಆರ್. ಅವರು ಆರಷರ ಅಪರಾಧವನ್ನು ಸಾಬೀತುಪಡಿಸಿ ತೀರ್ಪು ಪ್ರಕಟಿಸಿದ್ದಾರೆ.
ಆರೋಪಿ ಬಸ್ ಚಾಲಕ ನಿಶಿತ್ ಶೆಟ್ಟಿ ಹಾಗೂ ಬಸ್ ಮಾಲೀಕ ಪ್ರೀತಮ್ ದೇವೇಂದ್ರ ಕುಲಾಲ್ ಇಬ್ಬರಿಗೂ ತಲಾ ಒಂದು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.