ಮಂಗಳೂರು, ಆಗಸ್ಟ್ 31: ಸಿಟಿ ಬಸ್ ಹರಿದು ಮಹಿಳಾ ಪಾದಚಾರಿಯೋರ್ವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದಲ್ಲಿ ಸಂಭವಿಸಿದೆ. ಸೋಮವಾರ ಬೆಳಗ್ಗೆ ಸುಮಾರು 8:30ರ ವೇಳೆಗೆ ಉರ್ವ ಮಾರ್ಕೆಟ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ಮಹಿಳಾ ಪಾದಚಾರಿಯೊಬ್ಬರ ಮೇಲೆ ಬಸ್ ಹರಿದಿದೆ. ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
ಮಹಿಳಾ ಪಾದಚಾರಿಯೊಬ್ಬರು ರಸ್ತೆ ದಾಟುತ್ತಿದ್ದಾಗ KA 19 D 3657 ನೋಂದಣಿ ಸಂಖ್ಯೆಯ ಬಸ್‌ನ ಚಾಲಕ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅಜಾಗರೂಕತೆಯಿಂದ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಬಸ್‌ನ ಬಲಭಾಗದ ಮುಂಭಾಗದ ಚಕ್ರವು ಪಾದಚಾರಿ ಮಹಿಳೆಯ ಕಾಲಿನ ಮೇಲೆ ಹರಿದು, ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಸಂತ್ರಸ್ತ ಮಹಿಳೆಯನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎ.ಜೆ. ಆಸ್ಪತ್ರೆಗೆ (AJ Hospital) ದಾಖಲಿಸಲಾಗಿದೆ.
ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
