ಮಂಗಳೂರು,ಆಗಸ್ಟ್ 30: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ವ್ಯವಸ್ಥೆಯು ಸರ್ವಾಧಿಕಾರ ಧೋರಣೆ ತಾಳುತ್ತಿದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ಏರ್ಪೋರ್ಟ್ ಲೀಸ್‌ಗೆ ಮಾತ್ರ ನೀಡಲಾಗಿದೆ. ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಿಲ್ಲ ಎಂಬುದು ಆಡಳಿತ ಮಂಡಳಿಯ ಗಮನದಲ್ಲಿರಲಿ ಎಂದು ಅವರು ಎಚ್ಚರಿಸಿದರು.
ಸ್ಥಳೀಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಅವಮಾನ:
ಏರ್‌ಪೋರ್ಟ್‌ನಿಂದ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯ ಶಾಸಕರಿಗೂ ಯಾವುದೇ ಗೌರವ ನೀಡುತ್ತಿಲ್ಲ ಎಂದು ದೂರಿದರು. ತುಳುನಾಡಿಗೆ ಬರುವ ಪ್ರವಾಸಿಗರಿಗೆ ಸ್ವಾಗತ ಕೋರಿ ಏರ್‌ಪೋರ್ಟ್ ರಸ್ತೆಯ ಪಟ್ಟಣ ಪಂಚಾಯತ್ ಜಾಗದಲ್ಲಿ ಹಾಕಲಾಗಿದ್ದ ಅಭಿನಂದನಾ ಫಲಕವನ್ನು ಮೂಲೆಗೆಸೆದು, ಆಭರಣ ಸಂಸ್ಥೆಯೊಂದರ ಜಾಹೀರಾತು ಅಳವಡಿಸಲಾಗಿದೆ ಎಂದು ಆರೋಪಿಸಿದರು.
ರಿಕ್ಷಾದವರು ಪ್ರಯಾಣಿಕರನ್ನು ಪಿಕ್‌ಅಪ್ ಮಾಡಿ ಬರಬೇಕಾದರೆ ಏರ್‌ಪೋರ್ಟ್‌ನವರಿಗೆ 100 ರೂ. ಹಣ ಪಾವತಿಸಬೇಕು. ಟ್ಯಾಕ್ಸಿಯವರು 18 ಲಕ್ಷಕ್ಕೂ ಅಧಿಕ ಹಣ ಪಾವತಿಸಿದ್ದರೂ ಅವರಿಗೆ ಅಲ್ಲಿ ನಿಲುಗಡೆಗೆ ಸರಿಯಾದ ಅವಕಾಶವಿಲ್ಲ ಎಂದು ಅಳಲು ತೋಡಿಕೊಂಡರು. ಮಳೆ ಬಂದಾಗ ನೀರು ಮನೆಗಳಿಗೆ ಹರಿಯುತ್ತಿದ್ದರೂ ಏರ್‌ಪೋರ್ಟ್ ಆಡಳಿತದವರು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕೂಡಲೇ ಸಂಸದರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.