BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಸಾಮಾಜಿಕ ಭದ್ರತಾ ಪಿಂಚಣಿಗೆ ₹32,000 ಆದಾಯ ಮಿತಿ ಬಡವರ ಮೇಲೆ ಅನ್ಯಾಯ - ದಾಖಲೆಗಳ ಹೆಸರಿನಲ್ಲಿ ಫಲಾನುಭವಿಗಳಿಗೆ ಕಿರುಕುಳ ನಿಲ್ಲಿಸಬೇಕು ;ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹ



ಮಂಗಳೂರು, ಆಗಸ್ಟ್ 11: ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ಇತರ ದುರ್ಬಲ ವರ್ಗದ ಜನರಿಗೆ ನೀಡುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಡೆಯಲು ಕರ್ನಾಟಕದಲ್ಲಿ ಇನ್ನೂ ವಾರ್ಷಿಕ ಕುಟುಂಬ ಆದಾಯ ₹32,000 ಎಂಬ ಅತ್ಯಂತ ಕಡಿಮೆ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಮಂಗಳೂರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಕಲ್ಯಾಣ ಯೋಜನೆಗಳು ಜನರ ಹಕ್ಕಾಗಿರಬೇಕೇ ಹೊರತು ದಾಖಲೆಗಳ ಹೆಸರಿನಲ್ಲಿ ಜನರನ್ನು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸುವ ವ್ಯವಸ್ಥೆಯಾಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂ ರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.

ಪ್ರಮುಖ ವಿಚಾರಗಳು ಮತ್ತು ಬೇಡಿಕೆಗಳು:
₹32,000 ಆದಾಯ ಮಿತಿ ಇಂದಿನ ವಾಸ್ತವಿಕತೆಗೆ ಸಂಪೂರ್ಣ ವಿರುದ್ಧ:
ಇಂದಿನ ಜೀವನ ವೆಚ್ಚದ ಪರಿಸ್ಥಿತಿಯಲ್ಲಿ ವಾರ್ಷಿಕ ₹32,000 ಆದಾಯ ಮಿತಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ದಿನಗೂಲಿ ಕಾರ್ಮಿಕರ ಆದಾಯವೇ ವರ್ಷಕ್ಕೆ ₹1.5–₹2 ಲಕ್ಷವನ್ನು ಮೀರಿದರೂ, ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಈ ಹಳೆಯ ಮಿತಿ ಅನ್ವಯಿಸುವುದು ಅಮಾನವೀಯ.
ಇತರ ರಾಜ್ಯಗಳಿಗಿಂತ ಕರ್ನಾಟಕದ ಮಾನದಂಡ ಅತ್ಯಂತ ಕಡಿಮೆ:
ತೆಲಂಗಾಣ: ಗ್ರಾಮೀಣ ಪ್ರದೇಶದಲ್ಲಿ ₹1.50 ಲಕ್ಷ ಮತ್ತು ನಗರ ಪ್ರದೇಶದಲ್ಲಿ ₹2 ಲಕ್ಷದವರೆಗೆ ಆದಾಯ ಮಾನದಂಡ.
ಹರಿಯಾಣ: Family ID ಆಧಾರಿತ ವ್ಯವಸ್ಥೆಯಲ್ಲಿ ₹3 ಲಕ್ಷದವರೆಗೆ ವಾರ್ಷಿಕ ಕುಟುಂಬ ಆದಾಯದ ಮಾನದಂಡ.
ಆದರೆ ಕರ್ನಾಟಕದಲ್ಲಿ ಕೇವಲ ₹32,000 ಮಿತಿ ಮುಂದುವರಿದಿರುವುದು ಬಡವರನ್ನು ಸಾಮಾಜಿಕ ಭದ್ರತೆಯಿಂದ ಹೊರಗಿಡುವಂತಿದೆ.
BPL ಕಾರ್ಡ್‌ನ್ನೇ ಏಕೀಕೃತ ಅರ್ಹತಾ ಮಾನದಂಡವನ್ನಾಗಿ ಮಾಡಬೇಕು:
ಸರ್ಕಾರ BPL ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ ಹೊಂದಿರುವಂತೆ, ಸಾಮಾಜಿಕ ಭದ್ರತಾ ಪಿಂಚಣಿಗಳಿಗೂ ಅದೇ ಮಾನದಂಡವನ್ನು ಅನ್ವಯಿಸಬೇಕು. ಇದರಿಂದ ಪ್ರತಿ ಯೋಜನೆಗೂ ಪ್ರತ್ಯೇಕ ಆದಾಯ ಪ್ರಮಾಣಪತ್ರ ಪಡೆಯುವ ಅನಗತ್ಯ ವ್ಯವಸ್ಥೆಯನ್ನು ತೆಗೆದುಹಾಕಬಹುದು.
ದಾಖಲೆಗಳ ಕಿರುಕುಳ ನಿಲ್ಲಬೇಕು:
ಸರ್ಕಾರದ ವಿವಿಧ ಇಲಾಖೆಗಳಲ್ಲೇ ಆಧಾರ್, ರೇಷನ್ ಕಾರ್ಡ್, ಆದಾಯ ಹಾಗೂ ಇತರ ದಾಖಲೆಗಳು ಲಭ್ಯವಿರುವಾಗ, ಫಲಾನುಭವಿಗಳಿಂದ ಪುನಃ ದಾಖಲೆಗಳನ್ನು ಕೇಳುವುದು ಡಿಜಿಟಲ್ ಆಡಳಿತದ ಉದ್ದೇಶಕ್ಕೆ ವಿರುದ್ಧವಾಗಿದೆ.
ಎಸ್‌ಡಿಪಿಐಯ ಪ್ರಮುಖ ಬೇಡಿಕೆಗಳು:
ಸಾಮಾಜಿಕ ಭದ್ರತಾ ಪಿಂಚಣಿಗೆ ಇರುವ ₹32,000 ವಾರ್ಷಿಕ ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಬೇಕು. BPL ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸಿ, ಅದನ್ನೇ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಸಾಮಾಜಿಕ ಭದ್ರತಾ ಯೋಜನೆಗಳ ಏಕೀಕೃತ ಆರ್ಥಿಕ ಅರ್ಹತಾ ಮಾನದಂಡವನ್ನಾಗಿ ಮಾಡಬೇಕು. ಈಗಾಗಲೇ ಫಲಾನುಭವಿಗಳಾಗಿ ಗುರುತಿಸಲ್ಪಟ್ಟಿರುವವರಿಂದ ಮರುಮರು ದಾಖಲೆಗಳನ್ನು ಕೇಳುವ ಕ್ರಮವನ್ನು ತಕ್ಷಣ ಕೈಬಿಡಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ದಾಖಲೆಗಳನ್ನು ಪರಸ್ಪರ ಸಂಯೋಜಿಸಿ “No Re-documentation” ವ್ಯವಸ್ಥೆ ಜಾರಿಗೆ ತರಬೇಕು. ಯಾವುದೇ ಫಲಾನುಭವಿಯ ಪಿಂಚಣಿಯನ್ನು ಸ್ಥಗಿತಗೊಳಿಸುವ ಮೊದಲು ಕಡ್ಡಾಯವಾಗಿ ನೋಟಿಸ್, ಕಾರಣ ತಿಳಿಸುವ ಅವಕಾಶ ಮತ್ತು ಮೇಲ್ಮನವಿ ವ್ಯವಸ್ಥೆ ಕಲ್ಪಿಸಬೇಕು.ವಯೋವೃದ್ಧರು, ವಿಧವೆಯರು ಮತ್ತು ಅಂಗವಿಕಲರನ್ನು ದಾಖಲೆಗಳ ಹೆಸರಿನಲ್ಲಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದನ್ನು ನಿಲ್ಲಿಸಬೇಕು. ಸಾಮಾಜಿಕ ಭದ್ರತಾ ಪಿಂಚಣಿಗಳ ಮೊತ್ತವನ್ನು ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಪರಿಷ್ಕರಿಸಬೇಕು.ರಾಜ್ಯದಲ್ಲಿ “ಒಂದು ಕುಟುಂಬ – ಒಂದು ಆದಾಯ ಮಾನದಂಡ – ಒಂದು ಅರ್ಹತಾ ವ್ಯವಸ್ಥೆ” ಎಂಬ ಸರಳ ಮತ್ತು ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು.
 ಸರ್ಕಾರ ಈ ಕುರಿತು ತಕ್ಷಣ ಸ್ಪಷ್ಟವಾದ ನೀತಿ ನಿರ್ಧಾರ ಕೈಗೊಳ್ಳದಿದ್ದರೆ, ಬಡವರು ಮತ್ತು ದುರ್ಬಲ ವರ್ಗದ ಜನರ ಹಕ್ಕುಗಳಿಗಾಗಿ SDPI ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಿದೆ ಎಂದು ಅಬ್ದುಲ್ ಮಜೀದ್ ಎಚ್ಚರಿಸಿದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!