ಮಂಗಳೂರು: ಕಡಲ ತಡಿಯ ಬಂದರು ನಗರಿ ಮಂಗಳೂರಿನಲ್ಲಿ ದಶಕಗಳ ಕಾಲ ಆನೇಕ ತನ್ನ ನ್ಯಾಯಾದಾನದ ಮೂಲಕ ಸಾವಿರಾರು ಇತಿಹಾಸಗಳನ್ನು ಬರೆದ ಐತಿಹಾಸಿಕ ಹಳೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಟ್ಟಡ ಇತಿಹಾಸದ ಕಾಲಗರ್ಭ ಸೇರಲಿದೆ.
1862ರಲ್ಲಿ ನಿರ್ಮಾಣಗೊಂಡು ಮಂಗಳೂರಿನಲ್ಲಿ ಸುಮಾರು 16 ದಶಕಗಳ ಕಾಲ ನ್ಯಾಯದಾನದ ಕೇಂದ್ರವಾಗಿದ್ದ,ಕೆಂಪು ಕಲ್ಲಿನ (Laterite) ಈ ಹಳೆಯ ಕೋರ್ಟ್ ಕಟ್ಟಡ ಶಾಶ್ವತವಾಗಿ ಕಣ್ಮರೆಯಾಗಲಿದೆ.
2014ರಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರು ಪಕ್ಕದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಬಳಿಕ ಮೂಕ ಸಾಕ್ಷಿಯಾಗಿ ನಿಂತಿದ್ದ ಈ ಐತಿಹಾಸಿಕ ಕಟ್ಟಡವನ್ನು ಕೆಡವಿ, ಆಧುನಿಕ 5 ಮಹಡಿಯ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.
ನೆನಪುಗಳ ಆಗರ ಈ ಹಳೆಯ ನ್ಯಾಯಾಲಯ:
ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಇತಿಹಾಸ ಪ್ರಸಿದ್ದ ಬಾವುಟ ಗುಡ್ಡದ ಮತ್ತೊಂದು ಮಗ್ಗುಲಲ್ಲಿರು ಕೋರ್ಟ್ ಗುಡ್ಡೆಯ ಹಸಿರು ಪೃಕೃತಿ, ಮತ್ತು ದೂರದ ಅರಬ್ಬಿ ಸಮುದ್ರದ ಮಧ್ಯೆ ವಿರಾಜಮಾನವಾಗಿದ್ದ ಈ ಕೆಂಪು ಕಲ್ಲು ಮತ್ತು ಮಂಗಳೂರು ಹೆಂಚು, ಭಾರವಾದ ಮರದ ತೊಲೆಗಳ ಕಟ್ಟಡದ ಹಾಲಿನಲ್ಲಿ ನ್ಯಾಯದ ಧ್ವನಿ ಅನುರಣಿಸಿತ್ತು. ಈ ನ್ಯಾಯಾಲಯದ ಕಟ್ಟಡವು 1862ರಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಂದ್ರೆ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದ ದಕ್ಷಿಣ ಕನ್ನಡ ಪ್ರದೇಶದ ಕೆಂದ್ರ ಸ್ಥಾನ ವಾದ ಮಂಗಳೂರಿನಲ್ಲಿ ನಿರ್ಮಾಣಗೊಂಡಿತು. ಈ ಕಟ್ಟಡದ ವಾಸ್ತುಶಿಲ್ಪ, ವಿನ್ಯಾಸ ಮತ್ತು ನ್ಯಾಯಾಧೀಶರ ಆಸನದ ಮೇಲಿರುವ "Veritas Et Iustitia Imperii Fundamenta" (ಸತ್ಯ ಮತ್ತು ನ್ಯಾಯವೇ ಆಡಳಿತದ ಅಸ್ತಿವಾರ) ಎಂಬ ಲ್ಯಾಟಿನ್ ಭಾಷೆಯ ಶಾಸನವು ಬ್ರಿಟಿಷ್ ವಸಾಹತುಶಾಹಿ ಕಾನೂನು ವ್ಯವಸ್ಥೆಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬ್ರಿಟಿಷರ ಕಾಲದಲ್ಲಿ ಆರಂಭವಾದ ಈ ನ್ಯಾಯಾಲಯವು 2014ರವರೆಗೆ (ಸುಮಾರು 150ಕ್ಕೂ ಹೆಚ್ಚು ವರ್ಷಗಳ ಕಾಲ) ಮಂಗಳೂರಿನ ಪ್ರಮುಖ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುವ ಮೂಲಕ ತನ್ನದೇ ಆದ ಸುದೀರ್ಘ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಹಿರಿಯ ವಕೀಲರು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು, ನ್ಯಾಯಾಧೀಶರು ಮಹತ್ವದ ತೀರ್ಪುಗಳನ್ನು ನೀಡಿದ್ದರು. ನುರಿತ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಇದೇ ಅಂಗಳದಲ್ಲಿ.
ಐತಿಹಾಸಿ ತೀರ್ಪುಗಳು ಪ್ರಕಟವಾಗಿದ್ದ ಪ್ರಮುಖ ಕೋರ್ಟ್ ಕಟ್ಟಡ..
ಈ ಕೆಂಪು ಕಲ್ಲಿನ ಸುಂದರ ಮತ್ತು ತಂಪಾದ ಕಟ್ಟಡದ ಕೋರ್ಟ್ ಸಭಾಂಗಣದಲ್ಲಿ ಅನೇಕ ಐತಿಹಾಸಿಕ ತೀರ್ಪುಗಳು ಪ್ರಕಟವಾಗಿದ್ದುವು.
'ರಿಪ್ಪರ್' ಚಂದ್ರನ್ ಪ್ರಕರಣ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ, ಜನರ ನಿದ್ದೆ ಕೆಡಿಸಿದ್ದ ಸರಣಿ ಹಂತಕ ಮುತ್ತುಕುಟ್ಟಿ ಚಂದ್ರನ್ (ರಿಪ್ಪರ್ ಚಂದ್ರನ್) ವಿಚಾರಣೆಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳು ಇಲ್ಲಿ ನಡೆದಿದ್ದವು.
ರಾಘವೇಂದ್ರ ನಗೋರಿ ಕೊಲೆ ಪ್ರಕರಣ (1978): ಕನ್ನಡ ದೈನಿಕದ ಸಂಪಾದಕ ರಾಘವೇಂದ್ರ ಎಂ. ನಗೋರಿ ಅವರ ಹತ್ಯೆ ಪ್ರಕರಣ ಕೂಡ ಇದೇ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು.
ಕಡಕಲ್ ಇಸ್ಮಾಯಿಲ್ ಕೊಲೆ ಪ್ರಕರಣ (1976): ಈ ಪ್ರಕರಣವು ಆ ಕಾಲದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಪ್ರವೀಣ್ ಕುಮಾರ್ ವಾಮಂಜೂರು ಪ್ರಕರಣ (1994): ತನ್ನ ಅತ್ತೆ ಸೇರಿದಂತೆ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣದ ವಿಚಾರಣೆ ಕೂಡ ಇಲ್ಲಿ ನಡೆದಿತ್ತು.

ನ್ಯಾಯಾಧೀಶರ ಆಸನದ ಮೇಲೆ ಲ್ಯಾಟಿನ್ ಭಾಷೆಯ ಬರಹ..!
ನ್ಯಾಯಾಧೀಶರು ಕೂರುವ ಆಸನದ ಮೇಲೆ ಲ್ಯಾಟಿನ್ ಭಾಷೆಯ ಬರಹ ಕಾಣ ಬಹುದು "Veritas Et Iustitia Imperii Fundamenta" (ಸತ್ಯ ಮತ್ತು ನ್ಯಾಯವೇ ಆಡಳಿತದ ಅಸ್ತಿವಾರ) ಎಂಬ ಬರಹವಿದೆ.
ಕೋರ್ಟ್ ಸಭಾಂಗಣದಲ್ಲಿ ವಿಚಾರಣೆ ನಡೆಯುವ ಹೊತ್ತಲ್ಲಿ ಸೆಕೆಯಿಂದ ಪಾರಾಗಲು ದಫೇದಾರರೊಬ್ಬರು ಹೊರಗಿನಿಂದ ಹಗ್ಗದ ಮೂಲಕ ಚಲಾಯಿಸುತ್ತಿದ್ದ ಕೈಯಂತ್ರದ ಫ್ಯಾನ್ ಇಲ್ಲಿನ ಮತ್ತೊಂದು ವಿಶೇಷತೆಯಾಗಿತ್ತು.
ಮರೆಯಾದ ಕೆಂಪು ಕೋರ್ಟ್ ಬೆಂಚು..!
ಸ್ವಾತಂತ್ರ್ಯ ಪೂರ್ವದಲ್ಲಿ ಈ ಬೆಂಚಿನ ಮೇಲೆ ಕೂರಲು ಡಿಮಾಂಡೋ ಡಿಮಾಂಡ್. ಎತ್ತರ ಪ್ರದೇಶದಲ್ಲಿ ಇದ್ದ ಬೆಂಚಿಗೆ ಅಂದು ರಾಜ ಮರ್ಯಾದೆ ಇತ್ತು. ಎಷ್ಟೋ ಜನರ ಪ್ರೀತಿಯ ಬೆಸುಗೆ ಬೆಂಚಿಗಿತ್ತು.
1941ನವೆಂಬರ್ 5 ರಂದು ವಿಠಲ್ ಶಾಂತರಂ ಎಂಬವರು ತನ್ನ ತಂದೆ ಶಾಂತರಂ ಮಂಗೇಶ್ ನೆನಪಿಗೆ ಈ ಬೆಂಚನ್ನು ಇಲ್ಲಿ ಸ್ಥಾಪಿಸಿದ್ದರಂತೆ. ಇದನ್ನು ಅಂದಿನ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎನ್. ಗೋಪಾಲನ್ ಅವರು ಉದ್ಘಾಟಿಸಿದ್ದರಂತೆ. ಕೋರ್ಟ್ ಕಟ್ಟಡದ ಹೊರ ಭಾಗದಲ್ಲಿ ಎತ್ತರದಲ್ಲಿ ಈ ಬೆಂಚನ್ನು ಹಾಕಲಾಗಿತ್ತು, ಸಂಜೆಯ ಬಿಡುವಿವ ವೇಳೆ ಈ ಬೆಂಚಲ್ಲಿ ಕೂತು ದೂರದ ಅರಬ್ಬೀ ಸಮುದ್ರ, ಸುಂದರ ಬಾನಿನಡಿಯ ಪೃಕೃತಿ ನೋಟ ಕಣ್ತುಂಬಿಕೊಳ್ಳುತ್ತಿದ್ದರು ಆಗಿನ ನ್ಯಾಯಾಧೀಶರರುಗಳು. ಆದರೆ ಗಗನ ಚುಂಬಿ ಕಟ್ಟಡಗಳು, ಮರಗಿಡಗಳು ಬಂದು ಇದೀಗ ಆ ಸಮುದ್ರದ ನೋಟವೇ ಮಾಯವಾಗಿದೆ. ಜೊತೆಗೆ ಅತ್ಯಂತ ಅಪರೂಪದ ಕಲಾಕೃತಿ ಹೊಂದಿದ್ದ ಈ ಕೆಂಪು ಬೆಂಚು ಕೂಡ ನಾಮವಶೇಷವಾಗಿ ಇತಿಹಾಸದ ಕಾಲಗರ್ಭಕ್ಕೆ ಸೇರಿದೆ.
ಆದರೆ ಇದೀಗ ಪ್ರಸ್ತುತ ಮಳೆ ಸೋರುವಿಕೆ, ಕಾಲ ಕಾಲಕ್ಕೆ ಆಗದ ನಿರ್ವಹಣೆಯ ಕೊರತೆ ಹಾಗೂ ವಯಸ್ಸಿನ ಕಾರಣದಿಂದ ಕಟ್ಟಡ ಶಿಥಿಲಗೊಂಡಿದೆ. ಕಟ್ಟಡ ಬಳಕೆಯಿಲ್ಲದೆ ಶಿಥಿಲಗೊಂಡಿದ್ದರೂ, ಅನೇಕ ವಕೀಲರ ಮನಸ್ಸಿನಲ್ಲಿ ಇದರ ನೆನಪುಗಳು ಮಾತ್ರ ಇನ್ನೂ ಹಸಿರಾಗಿವೆ. ಒಮ್ಮೆ ಇದನ್ನು ಕೆಡವಿದರೆ ಮುಂದಿನ ಪೀಳಿಗೆಗೆ ಈ ಐತಿಹಾಸಿಕ ಕಟ್ಟಡದ ಇತಿಹಾಸ ತೋರಿಸಲು ಏನೂ ಉಳಿಯುವುದಿಲ್ಲ ಎಂಬ ಕೊರಗು ಅನೇಕ ವಕೀಲರದ್ದಾಗಿದೆ.
ಅಂತಿಮವಾಗಿ, 164 ವರ್ಷಗಳ ಕಾಲ ಐತಿಹಾಸಿಕ ಸಾಕ್ಷಿಯಾಗಿದ್ದ ಈ ಭವ್ಯ ಕಟ್ಟಡ ಇನ್ನು ಮುಂದೆ ಕೇವಲ ಫೋಟೋಗಳಲ್ಲಿ ಮತ್ತು ಹಿರಿಯ ವಕೀಲರ ನೆನಪುಗಳಲ್ಲಿ ಮಾತ್ರ ಉಳಿಯಲಿದೆ ಎಂಬುದು ಮಾತ್ರ ಸತ್ಯ.

.jpeg)

