ಕಾರ್ನಾಡ್ ಸದಾಶಿವ ರಾವ್ ರವರು ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು. ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ತಮ್ಮ ಜೀವನದ ಕೊನೆಯಲ್ಲಿ ಏನನ್ನೂ ಉಳಿಸಿಕೊಳ್ಳದೇ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿ, ಅಕ್ಷರಶಃ ನಿರ್ಗತಿಕರಾಗಿ, ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಕೂಡ ಇಲ್ಲದೇ ಪ್ರಾಣ ನೀಗಿದ, ದೇಶದ ಹೆಮ್ಮೆಯ ಪುತ್ರ.
ಕಾರ್ನಾಡ್ ಸದಾಶಿವರಾಯರು ಹುಟ್ಟಿದ್ದು ಮಂಗಳೂರಿನಲ್ಲಿ 1881 ರಲ್ಲಿ. ಅವರು ಅತ್ಯಂತ ಶ್ರೀಮಂತ ವಕೀಲರಾಗಿದ್ದ ರಾಮಚಂದ್ರರಾಯರು ಮತ್ತು ತಾಯಿ ರಾಧಾಬಾಯಿ ಅವರ ಏಕಮಾತ್ರ ಪುತ್ರ. ಹುಡುಗನಾಗಿದ್ದಾಗಲೂ ಕೊಡುವುದರಲ್ಲಿಯೇ ಸಂತೋಷ. ತನ್ನ ಪುಸ್ತಕ, ಆಟದ ಸಾಮಾನುಗಳನ್ನು ಬಡ ಹುಡುಗರಿಗೆ ಹಂಚಿ ಬಂದು ತಂದೆಯಿಂದ ಬೈಸಿಕೊಂಡದ್ದು ಅನೇಕ ಬಾರಿ. ಸದಾಶಿವರಾಯರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ನಂತರ ಮುಂಬೈನಲ್ಲಿ ವಕೀಲಿ ಶಿಕ್ಷಣ ಪಡೆದರು.
ಆಗ ದೇಶದಲ್ಲಿ ಬಿರುಗಾಳಿಯಂತೆ ಹಬ್ಬುತ್ತಿದ್ದ ಸ್ವದೇಶೀ ಆಂದೋಲನ ಅವರನ್ನು ಸೆಳೆದು ಕೊಂಡಿತು. ತಾವೂ ಅತ್ಯಂತ ಸರಳ ಜೀವನ ನಡೆಸಲು ತೀರ್ಮಾನ ಮಾಡಿ, ತಮ್ಮ ಹೆಂಡತಿ ಶಾಂತಾಬಾಯಿಯವರೊಂದಿಗೆ ಬಾಲವಿಧವೆಯರ, ಹರಿಜನರ ಪುನರ್ವಸತಿ ಕಾರ್ಯಕ್ರಮಗಳನ್ನು ನಡೆಸಿದರು. ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಹರಿಜನರ ಪ್ರವೇಶವನ್ನು ಜನರ ಮನವೊಲಿಸಿ ಸಾಧಿಸಿದರು.
ತಮ್ಮ ಪತ್ನಿ ಶಾಂತಾ ಬಾಯಿಯವರ ಜೊತೆಗೂಡಿ 1911ರಲ್ಲಿ ಮಂಗಳೂರಿನಲ್ಲಿ ಮಹಿಳಾ ಸಭಾ ಸ್ಥಾಪಿಸಿದರು, ವಿಧವೆಯರಿಗೆ ಮತ್ತು ಬಡ ಹೆಣ್ಮಕ್ಕಳಿಗೆ ಹೊಲಿಗೆ ಇತ್ಯಾದಿ ವೃತ್ತಿಕೌಶಲ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸತೊಡಗಿದರು.
1919ರಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿ ಸತ್ಯಾಗ್ರಹಕ್ಕೆ ಕರೆ ನೀಡಿದಾಗ ಕರ್ನಾಟಕದಿಂದ ಸ್ವಯಂಸೇವಕರಾಗಿ ಹೋದ ಮೊದಲಿಗರಲ್ಲಿ ಸದಾಶಿವರಾಯರೊಬ್ಬರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದರಲ್ಲಿ ಮಗ್ನರಾಗಿ ಹೋದರು ಸದಾಶಿವರಾಯರು. 1923 ರಲ್ಲಿ ಒಂದೇ ವರ್ಷದಲ್ಲಿ ತಮ್ಮ ಕೊನೆಯ ಮಗಳು, ಒಬ್ಬನೇ ಮಗ ಮತ್ತು ತಮ್ಮ ಪ್ರಿಯ ಪತ್ನಿ ಶಾಂತಾಬಾಯಿಯವರನ್ನು ಕಳೆದುಕೊಂಡು ಅಘಾತದಿಂದ ಚೇತರಿಸಿಕೊಳ್ಳಲು ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೆ ಧಾವಿಸಿದರು. ಕೆಲವೇ ದಿನಗಳಲ್ಲಿ ಅವರಿಗೆ ಸುದ್ದಿ ಬಂದಿತು. ದಕ್ಷಿಣ ಕನ್ನಡದಲ್ಲಿ ಪ್ರವಾಹ ಹೆಚ್ಚಾಗಿದ್ದು ಜನರ ರಕ್ಷಣೆಗೆ ಪರಿಹಾರ ಕಾರ್ಯಕ್ರಮಗಳನ್ನು ನಡೆಸಬೇಕಿತ್ತು. ತಕ್ಷಣ ತಮ್ಮ ವೈಯಕ್ತಿಕ ಕೊರಗುಗಳನ್ನು ಮರೆತು ತಮ್ಮೂರಿಗೆ ಓಡಿ ಬಂದು, ತಮ್ಮಲ್ಲಿದ್ದ ಹಣವನ್ನೆಲ್ಲ ಹೊರತೆಗೆದು ಪರಿಹಾರ ಕಾಮಗಾರಿಗಳನ್ನು ನಡೆಸಿದರು.
ಸದಾಶಿವರಾಯರ ಮನೆ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಯಾಗಿತ್ತು. ಮಹಾತ್ಮಾ ಗಾಂಧಿ, ಚಿತ್ತರಂಜನ ದಾಸ, ರಾಜಗೋಪಾಲಾಚಾರಿ ಹಾಗೂ ಸರೋಜಿನಿ ನಾಯ್ಡುರವರಿಗೆ ವಸತಿಗೃಹವಾಗಿತ್ತು.
ದೇಶದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಾಗ ಕರ್ನಾಟಕದಲ್ಲಿಯೂ 13-4-1930ರಂದು ಪ್ರಾರಂಭಿಸಬೇಕೆಂದು ನಿರ್ಣಯವಾಯಿತು. ಆಗ ಎಐಸಿಸಿಯ ಸದಸ್ಯರೂ, ಪಿಸಿಸಿಯ ಅಧ್ಯಕ್ಷರೂ ಆಗಿದ್ದ ಕಾರ್ನಾಡು ಸದಾಶಿವರಾಯರು ಅಂಕೋಲೆಗೆ ಹೋಗಿ ಅಲ್ಲಿನ ಜನತೆಗೆ ಮಾರ್ಗದರ್ಶನ ನೀಡಿ ಅಲ್ಲಿ ನಾಲ್ಕು ದಿನಗಳಿದ್ದರು. ಮಂಗಳೂರಿನಲ್ಲೂ ಅದೇ ದಿನ ಉಪ್ಪಿನ ಸತ್ಯಾಗ್ರಹ ಆರಂಭವಾಯಿತು. ಎಪ್ರಿಲ್ 17ಕ್ಕೆ ರಾಯರು ಮಂಗಳೂರಿಗೆ ಹಿಂತಿರುಗಿದರು. ಅವರು ಮಂಗಳೂರು ತಲುಪಿದಾಗ ಇಲ್ಲಿನ ಜನತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಅವರಿಗೆ ಸ್ವಾಗತ ನೀಡಿದರು. ಹಾಗೆ ಬಂದವರೇ ಇಲ್ಲಿನ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅವರು ಸಮುದ್ರದಿಂದ ನೀರು ತಂದು ಉಪ್ಪು ಮಾಡುವ ಸಿದ್ಧತೆಯಲ್ಲಿರುವಾಗಲೇ ಅವರ ಬಂಧನವಾಯಿತು. ಅವರ ವಿಚಾರಣೆಯಾಗಿ ಎ. 30ರಂದು 15 ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು. ಅವರು ತಿರುಚಿನಾಪಳ್ಳಿ ಮತ್ತು ವೆಲ್ಲೂರು ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದರು. ಆಗ ನಮ್ಮ ಜಿಲ್ಲೆಯವರಾದ ಆರ್. ಕೆ. ಪ್ರಭು ಅವರೊಂದಿಗಿದ್ದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಅವರಿಗೆ ಮೂರು ಬಾರಿ ಜೈಲು ಶಿಕ್ಷೆಯಾಯಿತು. ಅವರ ಆರೋಗ್ಯ ಜೈಲಿನಲ್ಲಿ ಕುಸಿದುಹೋಯಿತು. ಅಧಿಕಾರಿಗಳು ಅವರಿಗೆ ಸೊಳ್ಳೆ ಪರದೆ ಕೊಟ್ಟರೆ, ಎಲ್ಲರಿಗೂ ಪರದೆ ಕೊಡುವವರೆಗೆ ತಾವೂ ಉಪಯೋಗಿಸುವುದಿಲ್ಲವೆಂದು ಹಟ ಹಿಡಿದು ಹಾಗೆಯೇ ಮಲಗಿದರು.
ದೇಶಕಾರ್ಯಕ್ಕಾಗಿ ತಮ್ಮದೆಲ್ಲವನ್ನು ಮಾರಿದರು, ತಮ್ಮ ಪಿತ್ರಾರ್ಜಿತವಾದ ಸ್ವಂತಮನೆ ಕೂಡ ಈ ದಾನದಲ್ಲಿ ಕರಗಿಹೋಯಿತು. ಕೊನೆಗೆ ಇವರ ತಾಯಿ ಮತ್ತು ಹೆಣ್ಣು ಮಕ್ಕಳು ಮಾತ್ರ ಬಾಡಿಗೆಯ ಮನೆಯಲ್ಲಿ ಬದುಕಿದರು. ಇವರ ದಾನದ ಪರಿಯನ್ನು ಕಂಡು ಡಾ. ಶಿವರಾಮ ಕಾರಂತರು ಅವರನ್ನು ‘ಧರ್ಮರಾಜ’ ಎಂದು ಕರೆದರು. ಅವರ ಪ್ರಖ್ಯಾತ ಕಾದಂಬರಿ ಔದಾರ್ಯದ ಉರುಳಲ್ಲಿಯ ನಾಯಕನ ಪಾತ್ರ ಸದಾಶಿವರಾಯರ ಜೀವನವನ್ನೇ ಹೋಲುತ್ತದೆ.
1936 ರ ಫೈಜಪುರ ಕಾಂಗ್ರೆಸ್ ಅಧಿವೇಶನದಲ್ಲಿ ಇವರಿದ್ದ ಗುಡಿಸಲು ಸೋರಿ ಇವರು ಪೂರ್ತಿ ನೆನೆದು ಹೋದರು. ಭಯಂಕರ ಜ್ವರ ಬಾಧಿಸಿತು. ಯಾರಿಗೂ ತಮ್ಮ ಅನಾರೋಗ್ಯದ ಬಗ್ಗೆ ಹೇಳದೇ ಹಾಗೆಯೇ ಮುಂಬೈಗೆ ಪಕ್ಷದ ಕೆಲಸ ಮಾಡಲು ಬಂದರು. ಜ್ವರ ತೀವ್ರವಾಗಿ ಮುಂದೆರಡು ದಿನಗಳಲ್ಲೇ ದೇಹತ್ಯಾಗ ಮಾಡಿದರು. ಆಗ ಅವರಿಗೆ ಕೇವಲ 56 ವರ್ಷ ವಯಸ್ಸು.
ಇವರು ದಕ್ಷಿಣದ ಗಾಂಧಿ ಎಂದು ಪ್ರಸಿದ್ಧರಾಗಿದ್ದರು. ಜನವರಿ 9,1937 ರಂದು ನಿಧನರಾದರು.
ಸುದ್ದಿ ತಿಳಿದ ಮೇಲೆ ತಮ್ಮ ಬಿಡುವಿಲ್ಲದ ಸಮಯದಲ್ಲೂ ಗಾಂಧೀಜಿ ಸದಾಶಿವರಾಯರ ತಾಯಿಯನ್ನು ಸಂತೈಸಲು ಮಂಗಳೂರಿಗೆ ಹೋದರು. ಅವರು ಆ ತಾಯಿಗೆ ನಮಸ್ಕರಿಸಿ, ‘ಅಮ್ಮಾ, ಇಂಥ ಧೀಮಂತ ಮಗನನ್ನು ಪಡೆದ ನೀವೇ ಧನ್ಯರು’ ಎಂದು ಕಣ್ಣೀರು ಒರೆಸಿಕೊಂಡರು.
ಕಾರ್ನಾಡ್ ಸದಾಶಿವರಾಯರು ದಕ್ಷಿಣಕನ್ನಡದ ಗಾಂಧಿಯೆಂದೇ ವಿಖ್ಯಾತರಾದವರು. ಆಗರ್ಭ ಶ್ರೀಮಂತರಾಗಿದ್ದ ಅವರು ತಮ್ಮದೆಲ್ಲ ಸಂಪತ್ತನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀರಿನಂತೆ ಚೆಲ್ಲಿದವರು. ಸಾಯುವಾಗ ಅವರ ಜೇಬಿನಲ್ಲಿ ಒಂದು ಪೈ ಕೂಡಾ ಇರಲಿಲ್ಲ.
ದುರಂತನಾಯಕ ಕಾರ್ನಾಡ್ ಸದಾಶಿವರಾಯರ ಪೂರ್ವಿಕರ ಆಸ್ತಿ ಎಲ್ಲೆಲ್ಲೂ ಇತ್ತು. ಯಾರೋ ಹೇಳಹೆಸರಿಲ್ಲದವರು ಅವರ ಆಸ್ತಿಯನ್ನು ನುಂಗಿ ಹಾಕಿದರು. ಬಾವುಟ ಗುಡ್ಡೆಯಲ್ಲಿ ಕಾರ್ನಾಡರ ಹೆಸರಿನಲ್ಲಿ ಒಂದು ಟ್ರಸ್ಟ್, ಮಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರನ್ನಿಟ್ಟದ್ದು ಹೊರತು ಪಡಿಸಿದರೆ ಅವರ ಯಾವುದೇ ಕುರುಹುಗಳಿಲ್ಲ. ಸದಾಶಿವ ರಾವ್ ಹಾಗೂ ಶಾಂತಾ ಬಾಯಿ ಅವರ ಸ್ಮಾರಕವಾಗಬೇಕಿದ್ದ ಮಹಿಳಾ ಸಭಾದ ಕಟ್ಟಡವು ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿರೂಪಗೊಂಡಿದೆ. ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ಅವರ ಮನೆ ಇದ್ದ ಕಟ್ಟಡವನ್ನು ಎಸ್ ಸಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ದಶಕಗಳ ಹಿಂದೇಯೇ ಕೆಡವಿ ಹಾಕಿ ಇದೀಗ ಬಹುಮಹಡಿ ಕಟ್ಟಡ ನಿರ್ಮಾಣವಾಗಿದೆ, ಈ ಮನೆಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸಹಕಾರಿ ಬ್ಯಾಂಕ್ ಪ್ರಾರಂಭವಾಗಿತ್ತು. ಬ್ಯಾಂಕ್ ಸ್ಥಾಪಕ ಮೊಳಹಳ್ಳಿ ಶಿವ ರಾವ್ ಅವರು ಆ ಮನೆಯನ್ನು ಹರಾಜಿಗೆ ಬಂದಾಗ ಖರೀದಿಸಿದ್ದರು. ಅಂದಿನಿಂದ ಅದು ಬ್ಯಾಂಕಿನ ಸ್ವಾಧೀನದಲ್ಲಿತ್ತು. "ಅದು ನೆಲ ಮತ್ತು ಮೊದಲ ಮಹಡಿ ( ಮಾಳಿಗೆ ) ಹೊಂದಿರುವ ವಿಶಾಲವಾದ ಮನೆಯಾಗಿತ್ತು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರೋಜಿನಿ ನಾಯ್ಡು ಮತ್ತು ಇತರರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಮಂಗಳೂರಿಗೆ ಭೇಟಿ ನೀಡಿದಾಗ ಆ ಮನೆಯಲ್ಲಿ ತಂಗುತ್ತಿದ್ದರು. ದಿ| ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವಾ ಅವರು ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾಗಿದ್ದಾಗ (1976-80) ರಾವ್ ಅವರ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಯೋಜಿಸಿದ್ದರು. ತಮ್ಮ ಜೀವನದ ಕೊನೆಯಲ್ಲಿ ಏನನ್ನೂ ಉಳಿಸಿಕೊಳ್ಳದೇ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿ, ಅಕ್ಷರಶಃ ನಿರ್ಗತಿಕರಾಗಿ, ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಕೂಡ ಇಲ್ಲದೇ ಪ್ರಾಣ ನೀಗಿದ, ಕರ್ನಾಟಕದ ಹೆಮ್ಮೆಯ ಪುತ್ರ ಕಾರ್ನಾಡ್ ಸದಾಶಿವರಾಯರ ಹೆಸರಿನಲ್ಲಿ ಮಂಗಳೂರಿನಲ್ಲಿರುವುದು ಅವರ ಹೆಸರಿನಲ್ಲಿ 'ಕೆ ಎಸ್ ರಾವ್ ರಸ್ತೆ' ಮಾತ್ರ..