ಮಹಾರಾಷ್ಟ್ರ, ಆಗಸ್ಟ್ 21 : ಮೊಬೈಲ್ ಫೋನ್ ವಿಚಾರವಾಗಿ ಪಾಲಕರ ಜತೆ ಜಗಳವಾಡಿಕೊಂಡು ಬೆಟ್ಟ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದ 19 ವರ್ಷದ ಯುವಕನನ್ನು ರಕ್ಷಿಸಲು ಹೋಗಿ, ಆತನ ತಂದೆ ಮತ್ತು ತಾಯಿ ಕೂಡ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ವಾಲುಜ್ ಎಂಐಡಿಸಿ (Waluj MIDC) ವ್ಯಾಪ್ತಿಯ ತಿಸ್‌ಗಾಂವ್ (Tisgaon) ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಛತ್ರಪತಿ ಸಂಭಾಜಿನಗರದ ಜಲ್ತಾ ಫಾಟಾ ಪ್ರದೇಶದ ನಿವಾಸಿಗಳಾದ ಮುರಳಿಧರ್ ಚಾಂದ್‌ಗುಡೆ (48) ಮತ್ತು ಸಂಗೀತಾ ಚಾಂದ್‌ಗುಡೆ ದಂಪತಿಯ 19 ವರ್ಷದ ಮಗ ಕುನಾಲ್ ಮುರಳಿಧರ್ ಚಾಂದ್‌ಗುಡೆ, ತನಗೆ ಮೊಬೈಲ್ ಫೋನ್ ಬೇಕೆಂದು ಪಾಲಕರೊಂದಿಗೆ ಜಗಳವಾಡಿದ್ದನು. ಬಳಿಕ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಟ್ಟದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಗ್ರಾಮಸ್ಥರು ಕುನಾಲ್ ಜಿಗಿಯದಂತೆ ಮನವೊಲಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿ, ಯುವಕ ಕೆಳಗೆ ಹಾರಿದರೆ ರಕ್ಷಿಸಲು ಬಲೆ (Net) ಹಾಸುವ ಸಿದ್ಧತೆ ನಡೆಸಿದ್ದರು. ಆದರೆ ಕುನಾಲ್ ನಿರಂತರವಾಗಿ ತನ್ನ ಸ್ಥಳ ಬದಲಾಯಿಸುತ್ತಿದ್ದನು.
ಮಗನನ್ನು ಸಮಾಧಾನಪಡಿಸಲು ತಂದೆ ಮುರಳಿಧರ್ ಹತ್ತಿರ ಹೋದಾಗ, ಕುನಾಲ್ ಏಕಾಏಕಿ ಕೆಳಗೆ ಹಾರಿದನು. ಮಗನನ್ನು ಉಳಿಸಿಕೊಳ್ಳಲು ಹೋದ ತಂದೆ ಕೂಡ ಆತನ ಹಿಂದೆ ಬಿದ್ದು ಸಾವನ್ನಪ್ಪಿದರು. ಇದನ್ನು ಕಂಡು ಆಘಾತಕ್ಕೊಳಗಾದ ತಾಯಿ ಸಂಗೀತಾ ಕೂಡ ಬೆಟ್ಟದಿಂದ ಕೆಳಗೆ ಹಾರಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮೂವರ ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಕಳುಹಿಸಿಕೊಟ್ಟಿದ್ದಾರೆ.
https://x.com/milokmatabd/status/2090719607523008642/video/1