ಮಡಿಕೇರಿ, ಆಗಸ್ಟ್ 06 : ಕೊಡಗು ಜಿಲ್ಲೆಯಲ್ಲಿ ಕಾಡುಕೋಣ ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬೆನ್ನಟ್ಟಿ ಬಂಧಿಸಿದ್ದಾರೆ. ಕೊಡಗಿನ ಕೊಯನಾಡು ಅರಣ್ಯ ವಲಯ ವ್ಯಾಪ್ತಿಯ ಚೆಂಬು ಅರಣ್ಯದಲ್ಲಿಈ ಕಾಡುಕೋಣವನ್ನು ಆರೋಪಿಗಳು ಬೇಟೆಯಾಡಿದ್ದರು. ಆಗಸ್ಟ್ 5ರಂದು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಮಾಂಸ, ಬಂದೂಕು ಹಾಗೂ ಕಾರು ಸಮೇತ ಬಂಧಿಸಿದ್ದಾರೆ.ಚೆಂಬು ನಿವಾಸಿ ಗೌತಮ್ ಹಾಗೂ ಪೆರಾಜೆ ನಿವಾಸಿ ಶರತ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಕಾಡುಪಂಜ ನಿವಾಸಿ ಯತಿನ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳು ಕೊಡಗು ವ್ಯಾಪ್ತಿಯ ಚೆಂಬು ಅರಣ್ಯ ವಲಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಬಳಿಕ ಅದರ ಮಾಂಸವನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ , ‘KA 12’ ರಿಜಿಸ್ಟ್ರೇಷನ್ ಹೊಂದಿದ್ದ ಇಕೋ ಕಾರಿನಲ್ಲಿ ಸಾಗಿಸುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಕೊಯನಾಡು ಅರಣ್ಯ ಇಲಾಖೆ ತಂಡ ಕಲ್ಲುಗುಂಡಿಯ ಕೈಪಡ್ಕ ಎಂಬಲ್ಲಿ ಕಾರನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಕಾಡುಕೋಣದ ಮಾಂಸ, ಬೇಟೆಗೆ ಬಳಸಿದ್ದ ಕೋವಿ ಮತ್ತು ಕಾರನ್ನು ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂದಿಲ್ ಕುಮಾರ್ , ವಲಯ ಅರಣ್ಯಾಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ ಶ್ರೀಮತಿ ಶ್ರೀರಕ್ಷಾ, ಅಧಿಕಾರಿಗಳಾದ ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್ ಹಾಗೂ ವಿನಯ ಕೃಷ್ಣ ಪಾಲ್ಗೊಂಡಿದ್ದರು.