ಕಾರವಾರ, ಆಗಸ್ಟ್ 23 : ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ವಿದ್ಯಾರ್ಥಿ ಮೃತದೇಹ ಶೋಧ ಕಾರ್ಯಾಚರಣೆಗೆ ಸ್ವತಃ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆರೆಗಿಳಿದ ವಿದ್ಯಮಾನ ಉತ್ತರ ಕನ್ನಡದಲ್ಲಿ ನಡೆದಿದೆ. ..!
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಾಲಗಳ್ಳಿ ಸಮೀಪದ ಜಡ್ಡಿಕೆರೆಯಲ್ಲಿ ಮುಳುಗಿದ್ದ ವಿದ್ಯಾರ್ಥಿಯ ಮೃತದೇಹಕ್ಕಾಗಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಕುಮಟಾ ಠಾಣೆಯ ಪಿಎಸ್‌ಐ ಖಾದರ್ ಭಾಷಾ ಸ್ವತಃ ಕೆರೆಗೆ ಇಳಿದು ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಹೆಗಡೆ ಗ್ರಾಮದ ಗುನಗನಕೊಪ್ಪ ನಿವಾಸಿ ಪ್ರಶಾಂತ ಕೇಶವ ಮುಕ್ರಿ (18) ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿದ್ದರು.
ನೀರಿನ ಆಳ ಹಾಗೂ ಸೆಳೆತದ ಅರಿವಿಲ್ಲದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಾಹಿತಿ ತಿಳಿದ ಬಳಿಕ ಕುಮಟಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಪಿಎಸ್‌ಐ ಖಾದರ್ ಭಾಷಾ ಕೂಡ ನೀರಿಗಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜುಗಾರರೊಂದಿಗೆ ಸೇರಿ ವಿದ್ಯಾರ್ಥಿಯ ಮೃತದೇಹಕ್ಕಾಗಿ ಹುಡುಕಾಟ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.