Koppal Accident : ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ, ಮೂವರು ಯುವಕರ ದಾರುಣ ಅಂತ್ಯ..!
ಸುದ್ದಿವಾಣಿ
8/27/2026 08:19:00 AM
ಕೊಪ್ಪಳ, ಆಗಸ್ಟ್ 27 : ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಬುಧವಾರ ಸಂಜೆ ನಡೆದಿದೆ. ನರಗುಂದ ಪಟ್ಟಣದ ಮಾಬೂಸಾಬ್ (17), ಫಕ್ರುಸಾಬ್ (19) ಹಾಗೂ ಶಾನುಸಾಬ್ ಬಸಾಪುರ (15) ಮೃತ ಯುವಕರಾಗಿದ್ದಾರೆ. ಮೀಲಾದುನ್ನೆಬಿ ಪ್ರಯುಕ್ತ ಕೊಪ್ಪಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಮೂವರು ಯುವಕರು ಬೈಕ್‌ನಲ್ಲಿ ನರಗುಂದದಿಂದ ಕೊಪ್ಪಳದತ್ತ ಬರುತ್ತಿದ್ದರು. ಈ ವೇಳೆ ಬನ್ನಿಕೊಪ್ಪ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಪಂಚರ್ ಆಗಿ ರಸ್ತೆಬದಿಯಲ್ಲಿ ನಿಂತಿದ್ದ ಗೂಡ್ಸ್ ವಾಹನಕ್ಕೆ ಬೈಕ್ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಮೂವರು ಸವಾರರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಕುಕನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.
ಟ್ಯಾಗ್ಗಳು:
ರಾಜ್ಯ