ಕಾರವಾರ, ಆಗಸ್ಟ್ 26: ಹೋಂಗಾರ್ಡ್ ಕರ್ತವ್ಯದ ವೇಳೆ ಪರಿಚಿತರಾಗಿ ನಂತರ ಅಕ್ರಮ ಮದ್ಯ ಕಳ್ಳಸಾಗಾಟದ ದಂಧೆಗೆ ಇಳಿದಿದ್ದ ಇಬ್ಬರು ಹೋಂಗಾರ್ಡ್‌ಗಳು ಅಬಕಾರಿ ಅಧಿಕಾರಿಗಳ ದಿಢೀರ್ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಿಂದ ಬೃಹತ್ ಪ್ರಮಾಣದ ಗೋವಾ ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ: ಕಾರವಾರದ ಹಬ್ಬುವಾಡದ ಬಸವರಾಜು (34) ಹಾಗೂ ದೇವಳಮಕ್ಕಿಯ ನಾಗವೇಣಿ (33) ಹೋಂಗಾರ್ಡ್‌ಗಳಾಗಿ ಕರ್ತವ್ಯ ನಿರ್ವಹಿಸುವಾಗ ಪರಿಚಿತರಾಗಿದ್ದರು. ನಾಗವೇಣಿ ಅವರು ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಕೆಲಸಕ್ಕೆ ಸೇರಿದರೂ, ಬಿಡುವಿನ ವೇಳೆಯಲ್ಲಿ ಬಸವರಾಜು ಜೊತೆಗೂಡಿ ಈ ಅಕ್ರಮ ದಂಧೆಯನ್ನು ಮುಂದುವರಿಸಿದ್ದರು. ನಾಗವೇಣಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಕೆಲಸಕ್ಕೆ ಸೇರಿದರೂ, ಬಿಡುವಿನ ವೇಳೆಯಲ್ಲಿ ಬಸವರಾಜು ಜೊತೆಗೂಡಿ ಈ ಅಕ್ರಮ ದಂಧೆ ಮುಂದುವರಿಸಿದ್ದರು ಎನ್ನಲಾಗಿದೆ. ಕಾರವಾರದ ವಿನಯ್, ಉಡುಪಿಯ ಪ್ರಶಾಂತ್ ಸುವರ್ಣ ಹಾಗೂ ಕೇರಳದ ಚಂದ್ರಶೇಖರ್ ಎಂಬವರ ನೆರವಿನಿಂದ ಈ ಜೋಡಿಯು ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತಂದು, ಗಡಿ ದಾಟಿಸಿ ಕೇರಳದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ದೊಡ್ಡ ಜಾಲದ ಪ್ಲ್ಯಾನ್ ರೂಪಿಸಿತ್ತು.
438 ಲೀಟರ್ ಗೋವಾ ಮದ್ಯ ವಶ: ಕಾರವಾರ ನೋಂದಣಿಯ ಕೆಎ 30 ಸ್ವಿಫ್ಟ್ ಡಿಜೈಯರ್ ಕಾರಿನಲ್ಲಿ ಬರೋಬ್ಬರಿ 438 ಲೀಟರ್ ಗೋವಾ ಮದ್ಯದ ಬಾಟಲಿಗಳನ್ನು ತುಂಬಿಕೊಂಡು, ಕರ್ನಾಟಕದ ತೆರಿಗೆಗೆ ಚಳ್ಳೆಹಣ್ಣು ತಿನ್ನಿಸಿ ಕೇರಳದತ್ತ ಈ ಜೋಡಿ ತೆರಳುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಗಡಿ ದಾಟಿದ ಬಳಿಕ ಅಕ್ರಮ ಮದ್ಯ ಸಾಗಾಟದಾರರು ತಾವು ಸುರಕ್ಷಿತವೆಂದು ಭಾವಿಸಿದ್ದರು.
ಅಬಕಾರಿ ಅಧಿಕಾರಿಗಳ ಸಿನಿಮೀಯ ಕಾರ್ಯಾಚರಣೆ: ಆರೋಪಿಗಳ ಚಲನವಲನದ ಕುರಿತು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್. ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಅವರ ನಿರ್ದೇಶನದಂತೆ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಹಾಗೂ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್. ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿಯಿತು.
ಬಂಟ್ವಾಳ ಉಪವಿಭಾಗದ ಉಪ ಅಧೀಕ್ಷಕ ಸಂತೋಷ್ ಮೋಡಗಿ ಹಾಗೂ ನಿರೀಕ್ಷಕರು ಮತ್ತು ಉಪನಿರೀಕ್ಷಕರನ್ನೊಳಗೊಂಡ ತಂಡವು ಖಚಿತ ಕಾರನ್ನು ಅಡ್ಡಗಟ್ಟಿ ತೀವ್ರ ತಪಾಸಣೆ ನಡೆಸಿತು. ಕಾರ್ ಸೀಟಿನ ಕೆಳಗೆ ಹಾಗೂ ಡಿಕ್ಕಿಯಲ್ಲಿ ಅತ್ಯಂತ ಚಾಣಕ್ಷತನದಿಂದ ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಮದ್ಯದ ಬಾಟಲಿಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದರು.
ಅಕ್ರಮ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಅಬಕಾರಿ ಜಂಟಿ ಆಯುಕ್ತರ ಕಚೇರಿ ನಿರೀಕ್ಷಕಿ ಸುನಿತಾ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.
