BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Karnataka Food safety officials Raid on 36 Railway stations ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟ: ರಾಜ್ಯದ 36 ರೈಲ್ವೆ ನಿಲ್ದಾಣಗಳ ಹೋಟೆಲ್‌, ಕ್ಯಾಂಟೀನ್‌ಗಳ ಮೇಲೆ ಆಹಾರ ಇಲಾಖೆ ದಾಳಿ..!

 



ಬೆಂಗಳೂರು, ಆಗಸ್ಟ್ 20 :  ರೈಲು ಪ್ರಯಾಣಿಕರ ಆರೋಗ್ಯದ ಜೊತೆ ಹೋಟೆಲ್ ಹಾಗೂ ಕ್ಯಾಂಟೀನ್ ನಿರ್ವಾಹಕರು ಚೆಲ್ಲಾಟವಾಡುತ್ತಿರುವುದು ಆಹಾರ ಸುರಕ್ಷತಾ ಇಲಾಖೆಯ ದಿಢೀರ್ ದಾಳಿಯಲ್ಲಿ ಬಯಲಾಗಿದೆ. ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ನಡೆಸಿದ ತಪಾಸಣೆ ವೇಳೆ ಅವಧಿ ಮೀರಿದ ಹಾಲಿನ ಪ್ಯಾಕೆಟ್, ಕೊಳೆತ ತರಕಾರಿಗಳು ಹಾಗೂ ಮೈಸೂರಿನಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. 

ರಾಜ್ಯಾದ್ಯಂತ ರೈಲ್ವೆ ನಿಲ್ದಾಣಗಳ ಆವರಣದಲ್ಲಿರುವ ಹೋಟೆಲ್‌ಗಳು, ಕ್ಯಾಂಟೀನ್‌ಗಳು ಹಾಗೂ ಪ್ಯಾಂಟ್ರಿ ಕಾರ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಎಸ್‌ಆರ್, ಯಶವಂತಪುರ, ಕೆ.ಆರ್.ಪುರಂ, ಮೈಸೂರು, ಮಂಗಳೂರು, ಹುಬ್ಬಳ್ಳಿ, ಹಾವೇರಿ ಸೇರಿದಂತೆ ರಾಜ್ಯದ ಒಟ್ಟು 36 ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ಬರುವ 112 ಆಹಾರ ಸಂಸ್ಥೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಮೈಸೂರು ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಶೀಟ್ ಅಥವಾ ವಸ್ತುಗಳನ್ನು ಬಳಸಿ ಇಡ್ಲಿ ತಯಾರಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಅಡುಗೆಮನೆಯಲ್ಲಿ ಫಂಗಸ್ ಬೆಳೆದ ಈರುಳ್ಳಿ, ತರಕಾರಿಗಳು ಹಾಗೂ ಸೂಕ್ತವಲ್ಲದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಚಟ್ನಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಜಿಲೇಬಿಯಲ್ಲಿ ಹಳದಿ ಹಾಗೂ ಖೋವಾ ಪೇಡಾದಲ್ಲಿ ಗುಲಾಬಿ ಬಣ್ಣದ ಅಪಾಯಕಾರಿ ಕೃತಕ ಬಣ್ಣಗಳ ಬಳಕೆ ಕಂಡುಬಂದಿದೆ. ಹಾವೇರಿ ರೈಲು ನಿಲ್ದಾಣದಲ್ಲಿ ಅವಧಿ ಮೀರಿದ ನಂದಿನಿ ಮೊಸರು ಮತ್ತು ದೊಡ್ಲಾ ಹಾಲಿನ ಪ್ಯಾಕೆಟ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೆ.ಆರ್.ಪುರಂ ನಿಲ್ದಾಣದ ಹೋಟೆಲ್‌ನಲ್ಲಿ ತೀವ್ರ ಅನೈರ್ಮಲ್ಯ ವಾತಾವರಣ ಕಂಡು ಬಂದಿದೆ. ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಹೋಟೆಲ್ ಹಾಗೂ ಕ್ಯಾಂಟೀನ್ ನಿರ್ವಾಹಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

 ವಂದೇ ಭಾರತ್ ರೈಲಿಗೆ ಅಧಿಕಾರಿಗಳಿಂದ ಶ್ಲಾಘನೆ :

ಇನ್ನು ಮಂಗಳೂರು-ಕೇರಳ ಹಾಗೂ ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾತ್ರ ಉತ್ತಮ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಯ್ದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಅವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!