ಕಾರ್ಕಳ, ಆಗಸ್ಟ್ 04 : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಜುಗಾರಿ ಅಡ್ಡೆಗೆ ಕಾರ್ಕಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಡ್ಡೆಯಲ್ಲಿ ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ದಾಳಿ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಠಾಣಾ ಎಸ್‌ಐ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಸುಜೀತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಯಶೋಧರ@ಅಣ್ಣು, ನೂರು ಮಹಮ್ಮದ್, ರವಿಶೆಟ್ಟಿ ಹಾಗೂ ಸತೀಶ್ ಎಂಬ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ದಾಳಿ ವೇಳೆ ಜುಗಾರಿಗೆ ಬಳಸಲಾಗಿದ್ದ 16,350 ರೂ. ನಗದು, ಇಸ್ಪೀಟು ಎಲೆಗಳು, 7 ಮೊಬೈಲ್ ಫೋನ್‌ಗಳು (ಅಂದಾಜು ಮೌಲ್ಯ 17,000 ರೂ.) ಹಾಗೂ ಕುರ್ಚಿ ಸೇರಿದಂತೆ ಜುಗಾರಿ ನಡೆಸಲು ಬಳಸಿದ ಪೀಠೋಪಕರಣಗಳನ್ನು (ಅಂದಾಜು ಮೌಲ್ಯ 10,500 ರೂ.) ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.