ಕಡಬ,ಆಗಸ್ಟ್ 25: ಸಾರ್ವಜನಿಕರಿಗೆ ಹೆಚ್ಚಿನ ಹಣದ ಲಾಭದ ಆಮಿಷವೊಡ್ಡಿ ನಿಷೇಧಿತ ಹಣ ಪರಿಚಲನಾ ಯೋಜನೆ ನಡೆಸುತ್ತಿದ್ದ ಆರೋಪದ ಮೇರೆಗೆ ಹಾವೇರಿ ಮೂಲದ ‘ಕಿಂಗ್ಸ್ ಬಜಾರ್’ ಸಂಸ್ಥೆ ಹಾಗೂ ಸ್ಥಳೀಯ ವ್ಯಕ್ತಿಗಳ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿ ಮತ್ತು ಪತ್ತೆ: ಕಡಬ ಪೇಟೆಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರನ್ನು ಸೇರಿಸಿ ಸಭೆ ನಡೆಸಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ಆ.23ರಂದು ಕಡಬ ಪೊಲೀಸ್ ಠಾಣೆಯ ಗುಪ್ತವಾರ್ತೆ ಸಿಬ್ಬಂದಿ ಮಹೇಶ್ ಅವರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಈ ಜಾಲವನ್ನು ಪತ್ತೆಹಚ್ಚಿದ್ದಾರೆ.
ಯೋಜನೆಯ ಸ್ವರೂಪ: ಕಂಪನಿಗೆ ಸದಸ್ಯರಾದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು, ಬೆಲೆಬಾಳುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ಪ್ರತಿದಿನ ಕಮಿಷನ್ ಪಡೆಯಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸಲಾಗುತ್ತಿತ್ತು.
ಆರೋಪಿಗಳ ವಿವರ: ಪ್ರಕರಣದಲ್ಲಿ 'ಕಿಂಗ್ಸ್ ಬಜಾರ್' ಸಂಸ್ಥೆಯ ಮಾಲೀಕರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, ಕೊಕ್ಕಡ, ಪುತ್ತೂರು ಮತ್ತು ಕಡಬ ಮೂಲದವರಾದ ಸುಬ್ರಹ್ಮಣ್ಯ ಶಗ್ರಿತ್ತಾಯ, ಗುರುಮೂರ್ತಿ, ಸುರೇಶ್ ಆರ್., ಬಾಲಕೃಷ್ಣ ಪಿ.ಹೆಚ್., ಕಿರಣ್ ಕುಮಾರ್, ಶ್ರೀನಾಥ್ ಹಾಗೂ ಸಂದೇಶ್ ಎಂಬುವರನ್ನು ಇತರೆ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026 ರಂತೆ 'Prize Chits and Money Circulation Schemes (Banning) Act, 1978'ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಸ್ವಯಂಪ್ರೇರಿತ (Suo Moto) ಪ್ರಕರಣ ದಾಖಲಿಸಲಾಗಿದೆ. ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಕಡಿಮೆ ಅವಧಿಯಲ್ಲಿ ಅಸಾಮಾನ್ಯ ಲಾಭದ ಆಮಿಷವೊಡ್ಡುವ ಇಂತಹ ನಿಷೇಧಿತ ಯೋಜನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.