ಹೈದರಾಬಾದ್, ಆಗಸ್ಟ್ 12 : ಮನೆಗಳ ಅಡಿಯಲ್ಲಿ ಗುಪ್ತ ನಿಧಿ ಇದೆ ಅಂತ ನಂಬಿಸಿ, ಅಮಾಯಕ ಜನರಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಕುಖ್ಯಾತ ವಂಚಕರ ಜಾಲವನ್ನು ಹೈದರಾಬಾದ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಶಂಶಾಬಾದ್ ವಲಯದ ಟಾಸ್ಕ್ ಫೋರ್ಸ್ ಮತ್ತು ರಾಜೇಂದ್ರನಗರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಮುನಾವರ್, ಸೈಯದ್ ಅಲಿ ಅಶ್ರಫ್, ಮೊಹಮ್ಮದ್ ಹಾಜಿ ಹಾಗೂ ಮೊಹಮ್ಮದ್ ಸಲ್ಮಾನ್ ಬಂಧಿತ ಆರೋಪಿಗಳು. ಸುಲಭವಾಗಿ ಹಣ ಸಂಪಾದಿಸುವಾಸೆಯಿಂದ ಈ ಗ್ಯಾಂಗ್ ಬಾಯಿಗೆ ಬಂದ ಸುಳ್ಳುಗಳನ್ನು ಹೇಳಿ ಜನರಿಗೆ ಮೋಸ ಮಾಡುತ್ತಿತ್ತು. ಬಲಿಪಶುಗಳ ಮನೆಗೆ ಹೋಗಿ ನಿಮ್ಮ ಮನೆಯ ನೆಲದಡಿಯಲ್ಲಿ ಗುಪ್ತ ನಿಧಿ ಇದೆ ಅಂತ ನಂಬಿಸುತ್ತಿದ್ದ ಈ ವಂಚಕರು, ನಂತರ ಗುಂಡಿ ತೋಡಿ ಕಲ್ಲಿದ್ದಲು ಹಾಗೂ ನಕಲಿ ಚಿನ್ನದ ನಾಣ್ಯಗಳಿರುವ ಚೀಲವನ್ನು ಅಲ್ಲಿ ಹೂಳುತ್ತಿದ್ದರು. ಕಲ್ಲಿದ್ದಲು ಚಿನ್ನವಾಗಿ ಬದಲಾಗಲು ಸಮಯ ಹಿಡಿಯುತ್ತದೆ ಎಂದು ನಂಬಿಸಿ, ಕಣ್ಣಿಗೆ ಮಣ್ಣೆರಚಿ ಪರಾರಿಯಾಗುತ್ತಿದ್ದರು. ಇದುವರೆಗೆ ಈ ಕದೀಮರು ಬರೋಬ್ಬರಿ 11 ಜನರಿಗೆ ವಂಚಿಸಿ, ಒಟ್ಟು ₹1 ಕೋಟಿಗೂ ಅಧಿಕ ಹಣ ದೋಚಿದ್ದಾರೆ..!
ಆರೋಪಿಗಳಿಂದ ಎರಡು ಕಾರುಗಳು, ಒಂದು ಆಟೋ, ಎರಡು ಬೈಕ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, 25 ನಕಲಿ ಚಿನ್ನದ ನಾಣ್ಯಗಳು, 6 ಕೆಜಿ ಕಲ್ಲಿದ್ದಲು, ಮಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಗುಪ್ತ ನಿಧಿ ಕೊಡಿಸುವುದಾಗಿ ಯಾರಾದರೂ ಬಂದರೆ ಅಂಥವರ ಮಾತಿಗೆ ಸಾರ್ವಜನಿಕರು ಯಾರೂ ಮೋಸಹೋಗಬೇಡಿ. ಇಂತಹ ವಂಚಕರ ಬಗ್ಗೆ ಎಚ್ಚರದಿಂದಿರಿ ಮತ್ತು ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.