BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Hubli ನೈಋತ್ಯ ರೈಲ್ವೆಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ


ಹುಬ್ಬಳ್ಳಿ, ಆಗಸ್ಟ್ 15 : ನೈಋತ್ಯ ರೈಲ್ವೆಯು ಸುರಕ್ಷತೆ, ವೇಗ, ಆದಾಯ ಮತ್ತು ಪ್ರಯಾಣಿಕರ ಸೇವೆಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿನ ಅಭೂತಪೂರ್ವ ಬೆಳವಣಿಗೆಯ ಜೊತೆಗೆ, ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ ಎಂದು ನೈರುತ್ಯ ರೈಲ್ವೆಯ (SWR) ಮಹಾಪ್ರಬಂಧಕ  ಪಿ. ಅನಂತ್ ತಿಳಿಸಿದ್ದಾರೆ.

ನೌಕರರನ್ನುದ್ದೇಶಿಸಿ ಮಾತನಾಡಿದ ಮಹಾ ಪ್ರಭಂದಕರು, ನೈಋತ್ಯ ರೈಲ್ವೆ  ವಲಯವು ಜನವರಿಯಿಂದ ಜುಲೈ 2026ರ ಅವಧಿಯಲ್ಲಿ ಸುರಕ್ಷತೆ, ಮೂಲಸೌಕರ್ಯ ಅಭಿವೃದ್ಧಿ, ರೈಲು ಕಾರ್ಯಾಚರಣೆ, ಪ್ರಯಾಣಿಕರ ಸೇವೆಗಳು, ಆದಾಯ ಗಳಿಕೆ, ಸಿಬ್ಬಂದಿ ಕಲ್ಯಾಣ ಹಾಗೂ ಸುಸ್ಥಿರತೆಯ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಕಾಗಿ ಸಮಸ್ತ ಕುಟುಂಬದ ಸಮರ್ಪಿತ ಪ್ರಯತ್ನಗಳನ್ನು ಶ್ಲಾಘಿಸಿದರು.

ಸುರಕ್ಷತೆಯೇ ನೈಋತ್ಯ ರೈಲ್ವೆಯ ಅತ್ಯುನ್ನತ ಆದ್ಯತೆ ಎಂದು ಒತ್ತಿಹೇಳಿದ ಅವರು, ಈ ಅವಧಿಯಲ್ಲಿ ಉನ್ನತ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಂಡು ಯಾವುದೇ ಪರಿಣಾಮಕಾರಿ ರೈಲು ಅಪಘಾತ ಸಂಭವಿಸದಂತೆ ನೋಡಿಕೊಂಡಿರುವ ಸಿಬ್ಬಂದಿಯನ್ನು ಶ್ಲಾಘಿಸಿದರು. ತುಮಕೂರು–ಅರಸೀಕೆರೆ ವಿಭಾಗದ 98 ರೂಟ್ ಕಿಲೋಮೀಟರ್ ಹಾಗೂ ವೈಟ್‌ಫೀಲ್ಡ್–ಜೋಲಾರ್‌ಪೇಟೆ ವಿಭಾಗದ 122 ರೂಟ್ ಕಿಲೋಮೀಟರ್ಗಳಲ್ಲಿ ಸ್ಟ್ಯಾಂಡರ್ಡ್ ಕವಾಚ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 157 ಕಿ.ಮೀ. ಸಂಪೂರ್ಣ ಹಳಿ ನವೀಕರಣ (Complete Track Renewal) ಮತ್ತು 132 ಕಿ.ಮೀ. ಸುರಕ್ಷತಾ ಬೇಲಿ ಅಳವಡಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಮಾತನಾಡಿದ ಮಹಾ ಪ್ರಭಂದಕರು, ನೈಋತ್ಯ ರೈಲ್ವೆಯು 83 ಕಿ.ಮೀ. ಹೊಸ ಹಳಿ ಮಾರ್ಗವನ್ನು ಕಾರ್ಯಗತಗೊಳಿಸಿದ್ದು, ಇದರಲ್ಲಿ 41 ಕಿ.ಮೀ. ಹೊಸ ಮಾರ್ಗ ಹಾಗೂ 42 ಕಿ.ಮೀ. ಜೋಡಿಮಾರ್ಗ ಜೋಡಿಮಾರ್ಗ ಕಾಮಗಾರಿಗಳು ಸೇರಿವೆ ಎಂದು ತಿಳಿಸಿದರು. ಇದರಿಂದ ಸಂಪರ್ಕ ವ್ಯವಸ್ಥೆ ಹಾಗೂ ಮಾರ್ಗದ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ. ಕೆಎಸ್‌ಆರ್ ಬೆಂಗಳೂರು, ವೈಟ್‌ಫೀಲ್ಡ್ ಮತ್ತು ಚನ್ನಸಂದ್ರ ನಿಲ್ದಾಣಗಳ ಯಾರ್ಡ್ ಪುನರ್‌ವಿನ್ಯಾಸ ಕಾಮಗಾರಿಗಳು ಹೆಚ್ಚುವರಿ ಮಾರ್ಗಗಳ ನಿರ್ಮಾಣಕ್ಕೆ ಹಾಗೂ ರೈಲು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ನೆರವಾಗಿವೆ. ಅಲ್ಲದೆ, ಅಂದಾಜು ₹2,372 ಕೋಟಿ ವೆಚ್ಚದಲ್ಲಿ 65 ಕಿ.ಮೀ. ಉದ್ದದ ಹೊಸಪೇಟೆ–ಬಳ್ಳಾರಿ ನಾಲ್ಕು ಹಳಿ (Quadrupling) ಯೋಜನೆಗೆ ರೈಲ್ವೆ ಮಂಡಳಿಯು ಅನುಮೋದನೆ ನೀಡಿರುವುದನ್ನು ಅವರು ಉಲ್ಲೇಖಿಸಿದರು. ಭಾರತೀಯ ರೈಲ್ವೆಯ ‘ಮಿಷನ್ 25 ಟನ್’ ಅಡಿಯಲ್ಲಿ ತೋರಣಗಲ್ಲು–ಬಳ್ಳಾರಿ ಮತ್ತು ವ್ಯಾಸ ಕಾಲೋನಿ–ಸಾಸಲು ವಿಭಾಗಗಳ ಒಟ್ಟು 198 ಕಿ.ಮೀ. ಮಾರ್ಗವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಹೆಚ್ಚಿನ ಆಕ್ಸಲ್ ಭಾರವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಸರಕು ಸಾಗಣೆಯ ದಕ್ಷತೆಯನ್ನು ಸುಧಾರಿಸಲು ಇದು ಸಹಕಾರಿಯಾಗಿದೆ.

ರೈಲುಗಳ ಸಮಯಪಾಲನೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಕಾರ್ಯಾಚರಣೆ, ಎಂಜಿನಿಯರಿಂಗ್ ಹಾಗೂ ಇತರ ಮುಂಚೂಣಿ ಸಿಬ್ಬಂದಿ ವಹಿಸಿದ ಪ್ರಮುಖ ಪಾತ್ರವನ್ನು ಮಹಾ ಪ್ರಭಂದಕರು ಶ್ಲಾಘಿಸಿದರು. ಯಲಹಂಕ–ಧರ್ಮಾವರಂ ವಿಭಾಗದ 293 ಟ್ರ್ಯಾಕ್ ಕಿ.ಮೀ.ನಲ್ಲಿ ರೈಲುಗಳ ವೇಗವನ್ನು ಗಂಟೆಗೆ 110 ಕಿ.ಮೀ.ನಿಂದ 130 ಕಿ.ಮೀ.ಗೆ, ಮತ್ತೊಂದು 344 ಟ್ರ್ಯಾಕ್ ಕಿ.ಮೀ.ನಲ್ಲಿ ಗಂಟೆಗೆ 90 ಕಿ.ಮೀ.ನಿಂದ 110 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಈ ಕ್ರಮಗಳ ಪರಿಣಾಮವಾಗಿ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಸಮಯಪಾಲನೆ ಶೇ 88.16% ಕ್ಕೆ ತಲುಪಿದ್ದು, ಜುಲೈ 2026ರವರೆಗೆ ಅಖಿಲ ಭಾರತ ಮಟ್ಟದಲ್ಲಿ ನೈಋತ್ಯ ರೈಲ್ವೆಯು 5ನೇ ಸ್ಥಾನ ಗಳಿಸಿದೆ ಎಂದು ಅವರು ತಿಳಿಸಿದರು.

ಪ್ರಯಾಣಿಕರ ಸೇವೆಗಳ ವಿಸ್ತರಣೆಯ ಕುರಿತು ಮಾತನಾಡಿದ ಅವರು, ಜನವರಿಯಿಂದ ಜುಲೈ 2026ರ ಅವಧಿಯಲ್ಲಿ 22 ಹೊಸ ರೈಲುಗಳನ್ನು ಪರಿಚಯಿಸಲಾಗಿದ್ದು, 4 ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ ಹಾಗೂ 42 ರೈಲುಗಳನ್ನು ನಿಯಮಿತಗೊಳಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, 125 ರೈಲುಗಳ ವೇಗವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ 3,335 ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸಲಾಗಿದೆ. ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ 4,174 ಟ್ರಿಪ್‌ಗಳನ್ನು ಒಳಗೊಂಡ 234 ವಿಶೇಷ ರೈಲುಗಳನ್ನು ಸಂಚರಿಸಲಾಯಿತು. ವಿವಿಧ ಕ್ರಮಗಳ ಮೂಲಕ ಕೋಚಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ 15 ರೈಲುಗಳನ್ನು19 ICF ರೇಕ್‌ಗಳನ್ನು LHB ರೇಕ್‌ಗಳಾಗಿ ಪರಿವರ್ತಿಸಲಾಗಿದೆ.

ಆದಾಯ ಕ್ಷೇತ್ರದ ಸಾಧನೆಗಳನ್ನು ಉಲ್ಲೇಖಿಸಿದ ಅವರು, ವಾಣಿಜ್ಯ ಮತ್ತು ಕಾರ್ಯಾಚರಣೆ ವಿಭಾಗಗಳ ಸಿಬ್ಬಂದಿಯನ್ನು ಅಭಿನಂದಿಸಿದರು. ನೈಋತ್ಯ ರೈಲ್ವೆಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.8% ಬೆಳವಣಿಗೆಯೊಂದಿಗೆ 31.3 ದಶಲಕ್ಷ ಟನ್‌ಗಳ ದಾಖಲೆಯ ಸರಕು ಸಾಗಣೆ ಲೋಡಿಂಗ್ ಸಾಧಿಸಿದೆ. ಈ ಸಾಧನೆಯು ನೈಋತ್ಯ ರೈಲ್ವೆ ಅಸ್ತಿತ್ವಕ್ಕೆ ಬಂದ ನಂತರದ ಅತ್ಯಧಿಕ ಸರಕು ಲೋಡಿಂಗ್ ಆಗಿದೆ. ವಲಯವು ₹5,531 ಕೋಟಿ ಒಟ್ಟು ಆದಾಯ ದಾಖಲಿಸಿದ್ದು, ಟಿಕೆಟ್ ತಪಾಸಣಾ ಕಾರ್ಯಾಚರಣೆಯ ಮೂಲಕ 4.7 ಲಕ್ಷ ಪ್ರಕರಣಗಳನ್ನು ಪತ್ತೆಹಚ್ಚಿ ₹43 ಕೋಟಿ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ರೈಲ್ವೆ ರಕ್ಷಣಾ ಪಡೆಯ (RPF) ಕಾರ್ಯವನ್ನು ಶ್ಲಾಘಿಸಿದ ಅವರು, ಪ್ರಯಾಣಿಕರ ಸುರಕ್ಷತೆ ಹಾಗೂ ರೈಲ್ವೆ ಆಸ್ತಿಗಳ ಭದ್ರತೆಯನ್ನು ಖಚಿತಪಡಿಸುವಲ್ಲಿ ಪಡೆ ತೋರುತ್ತಿರುವ ನಿರಂತರ ಬದ್ಧತೆಯನ್ನು ಮೆಚ್ಚಿದರು. ಜುಲೈ 2026ರವರೆಗೆ RPF ₹3 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ₹2.41 ಕೋಟಿ ಮೌಲ್ಯದ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ಅವುಗಳ ವಾರಸುದಾರರಿಗೆ ಹಿಂತಿರುಗಿಸಿದೆ. ಅಲ್ಲದೆ, 340 ಮಕ್ಕಳು ಮತ್ತು 23 ದುರ್ಬಲ ಸ್ಥಿತಿಯಲ್ಲಿದ್ದ ವಯಸ್ಕರನ್ನು ರಕ್ಷಿಸುವ ಮೂಲಕ ಭದ್ರತೆಯ ಜೊತೆಗೆ ಮಾನವೀಯ ಸೇವೆಯಲ್ಲಿಯೂ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಅವರು ತಿಳಿಸಿದರು.

ಪ್ರಯಾಣಿಕರ ಸೌಲಭ್ಯಗಳ ಸುಧಾರಣೆಯ ಕುರಿತು ಮಾತನಾಡಿದ ಅವರು, ಜುಲೈ 2026ರವರೆಗೆ 73 ಲಿಫ್ಟ್‌ಗಳು ಮತ್ತು 64 ಎಸ್ಕಲೇಟರ್‌ಗಳನ್ನು ಕಾರ್ಯಗತಗೊಳಿಸಲಾಗಿದ್ದು, ಇದರಿಂದ ಪ್ರಯಾಣಿಕರ ಅನುಕೂಲ ಮತ್ತು ನಿಲ್ದಾಣಗಳ ಪ್ರವೇಶಸೌಲಭ್ಯ ಮತ್ತಷ್ಟು ಸುಧಾರಿಸಿದೆ ಎಂದು ಹೇಳಿದರು. ಅಮೃತ್ ಭಾರತ್ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ 9 ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಇದರ ಜೊತೆಗೆ, 14 ಮೇಲ್ಸೇತುವೆಗಳು, 23 ಕೆಳಸೇತುವೆಗಳು, 7 ಪಾದಚಾರಿ ಮೇಲ್ಸೇತುವೆಗಳು, 2 ಸಬ್‌ವೇಗಳು ಮತ್ತು 8 ಹೈ-ಲೆವೆಲ್ ಪ್ಲಾಟ್‌ಫಾರ್ಮ್‌ಗಳನ್ನು ಕಾರ್ಯಗತಗೊಳಿಸಲಾಗಿದೆ. ಪ್ರಯಾಣಿಕರಿಗೆ ತ್ವರಿತ ಹಾಗೂ ಸುಲಭ ಟಿಕೆಟ್ ಸೇವೆ ಒದಗಿಸುವ ಉದ್ದೇಶದಿಂದ 57 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಸಹ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

* ಸುರಕ್ಷತೆ ಮತ್ತು ಮೂಲಸೌಕರ್ಯ: ನೈಋತ್ಯ ರೈಲ್ವೆ ಶೂನ್ಯ ಪರಿಣಾಮದ ರೈಲು ಅಪಘಾತಗಳನ್ನು ದಾಖಲಿಸಿದೆ, 83 ಕಿಮೀ ಹೊಸ ಹಳಿಯನ್ನು ಕಾರ್ಯಾರಂಭ ಮಾಡಿದೆ. 

* ವೇಗವಾದ ಮತ್ತು ಉತ್ತಮ ರೈಲು ಸೇವೆಗಳು: 22 ರೈಲುಗಳನ್ನು ಪರಿಚಯಿಸಲಾಗಿದೆ, 42 ನಿಯಮಿತಗೊಳಿಸಲಾಗಿದೆ ಮತ್ತು 125 ವೇಗಗೊಳಿಸಲಾಗಿದೆ, 3,335 ನಿಮಿಷಗಳನ್ನು ಉಳಿಸಲಾಗಿದೆ. 

* ದಾಖಲೆಯ ಆದಾಯ ಮತ್ತು ಪ್ರಯಾಣಿಕರ ಸೌಲಭ್ಯಗಳು: ನೈಋತ್ಯ ರೈಲ್ವೆ 31.3 ಮಿಲಿಯನ್ ಟನ್‌ಗಳ ದಾಖಲೆಯ ಸರಕು ಸಾಗಣೆ ಮತ್ತು ₹5,531 ಕೋಟಿ ಒಟ್ಟು ಆದಾಯವನ್ನು ಸಾಧಿಸಿದೆ. 

* ಹಸಿರು ಮತ್ತು ಸುಸ್ಥಿರ ರೈಲ್ವೆಗಳು: ಸೌರಶಕ್ತಿ ಸಾಮರ್ಥ್ಯವು 8.4 MWp ತಲುಪಿದೆ, 212 ರೈಲು ಜೋಡಿಗಳಲ್ಲಿ 191 ರೈಲುಗಳನ್ನು ವಿದ್ಯುತ್ ಎಳೆತಕ್ಕೆ ಪರಿವರ್ತಿಸಲಾಗಿದೆ.

ಹಸಿರು ಮತ್ತು ಸುಸ್ಥಿರ ರೈಲ್ವೆ ವ್ಯವಸ್ಥೆಯ ನಿರ್ಮಾಣದತ್ತ ನೈಋತ್ಯ ರೈಲ್ವೆ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದ ಮಹಾ ಪ್ರಭಂದಕರು, 789 kWp ಹೆಚ್ಚುವರಿ ಸೌರ ವಿದ್ಯುತ್ ಸಾಮರ್ಥ್ಯವನ್ನು ಅಳವಡಿಸಲಾಗಿದ್ದು, ಇದರೊಂದಿಗೆ ವಲಯದ ಒಟ್ಟು ಸ್ಥಾಪಿತ ಸೌರ ಸಾಮರ್ಥ್ಯವು 8.4 MWpಗೆ ತಲುಪಿದೆ ಎಂದು ತಿಳಿಸಿದರು. ಈ ಸೌರ ವಿದ್ಯುತ್ ಘಟಕಗಳಿಂದ ಮೇ 2026ರವರೆಗೆ ಸುಮಾರು ₹2.6 ಕೋಟಿ ಉಳಿತಾಯವಾಗಿದೆ. 154 ರೈಲುಗಳಲ್ಲಿ ಹೆಡ್-ಆನ್-ಜನರೇಷನ್ (HOG) ವ್ಯವಸ್ಥೆ ಅಳವಡಿಸುವ ಮೂಲಕ ಜನವರಿಯಿಂದ ಜೂನ್ 2026ರವರೆಗೆ 12,650 ಕಿಲೋಲೀಟರ್ HSD (ಡೀಸೆಲ್) ಉಳಿತಾಯ ಮಾಡಲಾಗಿದ್ದು, ಇದರ ಅಂದಾಜು ಮೌಲ್ಯ ₹94.3 ಕೋಟಿ ಆಗಿದೆ. ಅಲ್ಲದೆ, ಒಟ್ಟು 212 ರೈಲು ಜೋಡಿಗಳ ಪೈಕಿ 191 ರೈಲು ಜೋಡಿಗಳನ್ನು ವಿದ್ಯುತ್ ಎಳೆತ (Electric Traction) ವ್ಯವಸ್ಥೆಗೆ ಪರಿವರ್ತಿಸಲಾಗಿದೆ, ಇದರಿಂದ ಇಂಧನ ಉಳಿತಾಯದ ಜೊತೆಗೆ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಕ್ರೀಡಾ ಕ್ಷೇತ್ರದಲ್ಲಿಯೂ ನೈಋತ್ಯ ರೈಲ್ವೆಯ ಸಿಬ್ಬಂದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದು ವಲಯಕ್ಕೆ ಕೀರ್ತಿ ತಂದಿರುವುದನ್ನು ಮಹಾ ಪ್ರಭಂದಕರು ಶ್ಲಾಘಿಸಿದರು. ಇದರ ಜೊತೆಗೆ, ಕಾರ್ಯಾಚರಣೆ, ಆಸ್ತಿ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಮನ್ನಣೆ ಪಡೆದಿರುವ ಸಿಬ್ಬಂದಿಯನ್ನೂ ಅವರು ಅಭಿನಂದಿಸಿ, ಅವರ ಸಾಧನೆಗಳು ಇಡೀ ನೈಋತ್ಯ ರೈಲ್ವೆ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ತಮ್ಮ ಭಾಷಣದ ಮುಕ್ತಾಯದಲ್ಲಿ, ನೈಋತ್ಯ ರೈಲ್ವೆ ಸಾಧಿಸಿರುವ ಎಲ್ಲಾ ಯಶಸ್ಸುಗಳು ಕುಟುಂಬದ ಪ್ರತಿಯೊಬ್ಬ ಸದಸ್ಯರ ಸಾಮೂಹಿಕ ಬದ್ಧತೆ, ಶಿಸ್ತು, ಸಮರ್ಪಣೆ ಮತ್ತು ತಂಡದ ಕಾರ್ಯದ ಪ್ರತಿಫಲ ಎಂದು ಹೇಳಿದರು. ಸುರಕ್ಷತೆ, ಸಮಯಪಾಲನೆ, ಪ್ರಯಾಣಿಕರ ತೃಪ್ತಿ, ಕಾರ್ಯಾಚರಣೆಯ ದಕ್ಷತೆ ಹಾಗೂ ಒಟ್ಟಾರೆ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಇದೇ ಬದ್ಧತೆ ಮತ್ತು ತಂಡದ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವಂತೆ ಅವರು ಎಲ್ಲಾ ಸಿಬ್ಬಂದಿಗೆ ಕರೆ ನೀಡಿದರು. ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪ್ರಯಾಣಿಕ ಸ್ನೇಹಿ ರೈಲ್ವೆ ಸೇವೆಗಳನ್ನು ಒದಗಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ನೈಋತ್ಯ ರೈಲ್ವೆ ತನ್ನ ಪ್ರಮುಖ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದರು.

ಶ್ರೀಮತಿ ಬೇಲ ಮೀನಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹುಬ್ಬಳ್ಳಿ ವಿಭಾಗ , ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು, ಹಾಗೂ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.


https://youtu.be/afqoMrJGDxw

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!