ಬೆಂಗಳೂರು, ಆಗಸ್ಟ್ 29: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಮ್ಮಿಕೊಂಡಿರುವ 'ಸುರಕ್ಷಿತ ಪಾದಚಾರಿ ಮಾರ್ಗ' ಅಭಿಯಾನಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪಾದಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಅತ್ಯಂತ ಅಗತ್ಯ ಎಂದು ನ್ಯಾಯಾಲಯ ಈ ವೇಳೆ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಆರ್. ರಾಜಗೋಪಾಲನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು.
ನ್ಯಾಯಾಲಯದ ಅಭಿಪ್ರಾಯ ಹಾಗೂ ವಾದದ ವಿವರ:
ಜಿಬಿಎ ಈ ಅಭಿಯಾನವನ್ನು ಅವೈಜ್ಞಾನಿಕವಾಗಿ ನಡೆಸುತ್ತಿದೆ. ಕಾರ್ಯಾಚರಣೆಯ ವ್ಯಾಪ್ತಿ, ಫುಟ್‌ಪಾತ್ ತೆರವುಗೊಳಿಸುವ ವಿಧಾನ ಹಾಗೂ ತೆರವುಗೊಳಿಸಿದ ನಂತರದ ನಿರ್ವಹಣೆಯ ವಿಷಯಗಳು ಗೊಂದಲಮಯವಾಗಿವೆ ಎಂದು ಸ್ವತಃ ವಾದ ಮಂಡಿಸಿದ ಅರ್ಜಿದಾರರು ಆರೋಪಿಸಿದರು.
ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಓಡಾಡಲು ಸ್ಥಳಾವಕಾಶ ಕಲ್ಪಿಸಬೇಕು ಎಂದು ಮಾತ್ರ ಸರ್ಕಾರದ ಆದೇಶ ತಿಳಿಸುತ್ತದೆ. ಪಾದಚಾರಿಗಳು ಯಾವುದೇ ಅಡೆತಡೆಯಿಲ್ಲದೆ ಫುಟ್‌ಪಾತ್‌ನಲ್ಲಿ ಓಡಾಡುವುದನ್ನು ಖಚಿತಪಡಿಸಿಕೊಳ್ಳಲು ಈ ಅಭಿಯಾನ ರೂಪಿಸಲಾಗಿದೆ. ಹೀಗಾಗಿ, ಇದಕ್ಕೆ ತಡೆ ನೀಡಲು ಯಾವುದೇ ಸಮರ್ಥ ಕಾರಣಗಳು ಕಂಡುಬರುತ್ತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸರ್ಕಾರಕ್ಕೆ ನೋಟಿಸ್ ಹಾಗೂ ಮುಂದಿನ ವಿಚಾರಣೆ:
2014ರ ಬೀದಿಬದಿ ವ್ಯಾಪಾರಿಗಳ ಕಾಯ್ದೆ ಮತ್ತು 2019ರ ನಿಯಮಗಳ ಅಡಿಯಲ್ಲಿ ರೂಪಿಸಿರುವ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಹಾಗೂ 'ಟೌನ್ ವೆಂಡಿಂಗ್ ಸಮಿತಿ' ರಚನೆಗೆ ಸೂಚಿಸಬೇಕೆಂದು ಅರ್ಜಿದಾರರು ಕೋರಿದ್ದರು.
ಈ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಜಿಬಿಎಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಕಾಯ್ದೆಗಳ ಅನುಷ್ಠಾನದ ಈಗಿನ ಸ್ಥಿತಿಗತಿ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಲಾಗಿದೆ.