ಹಾಸನ, ಆಗಸ್ಟ್ 04 : ಹಾಸದ ಸಕಲೇಶಪುರ ತಾಲ್ಲೂಕಿನ ಎಡಕುಮಾರಿ ಹಾಗೂ ಶಿರಿಬಾಗಿಲು ನಡುವಿನ ರೈಲ್ವೆ ಹಳಿಯ ಮೇಲೆ ಸಂಭವಿಸಿದ್ದ ಭಾರೀ ಗುಡ್ಡ ಕುಸಿತದ ಬಳಿಕ ಸ್ಥಗಿತಗೊಂಡಿದ್ದ ರೈಲು ಸಂಚಾರ ಇದೀಗ ಮತ್ತೆ ಆರಂಭವಾಗಿದೆ. ಕಳೆದ ಮೂರು ದಿನಗಳಿಂದ ನಡೆದ ನಿರಂತರ ಕಾರ್ಯಾಚರಣೆಯ ಬಳಿಕ ರೈಲ್ವೆ ಇಲಾಖೆ ಮಣ್ಣು ಹಾಗೂ ಬಂಡೆಕಲ್ಲುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮಾರ್ಗವನ್ನು ಸುರಕ್ಷಿತ ಸಂಚಾರಕ್ಕೆ ಸಜ್ಜುಗೊಳಿಸಿದೆ. . ಪ್ರತಿಕೂಲ ಹವಾಮಾನದ ನಡುವೆಯೂ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯಿತು ಭಾರೀ ಯಂತ್ರೋಪಕರಣಗಳ ನೆರವಿನಿಂದ ಹಳಿಯ ಮೇಲಿದ್ದ ಮಣ್ಣು, ಬಂಡೆಕಲ್ಲು ಹಾಗೂ ಅವಶೇಷಗಳನ್ನು ತೆರವುಗೊಳಿಸಿ ಹಳಿಯ ಸ್ಥಿರತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸಲಾಯಿತು.
ಮಾರ್ಗವನ್ನು ಸಂಪೂರ್ಣವಾಗಿ ಸಂಚಾರಕ್ಕೆ ಯೋಗ್ಯವಾಗುವಂತೆ ಸಿದ್ಧಪಡಿಸಿದ ಬಳಿಕ ರೈಲುಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ಸುಮಾರು 10 ಕಿಲೋಮೀಟರ್ ವೇಗ ಮಿತಿಯನ್ನು ವಿಧಿಸಲಾಗಿದೆ.ಮುನ್ನಚ್ಚರಿಕಾ ಕ್ರಮವಾಗಿ ಪರಿಸ್ಥಿತಿಯನ್ನು ನಿರಂತರವಾಗಿ ರೈಲ್ವೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.
ಮುಂದಿನ ಕೆಲವು ದಿನಗಳ ಕಾಲ ಭೂ ಕುಸಿತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ನಿಗಾ ವಹಿಸಲಾಗುತ್ತದೆ. ಮಳೆಯ ಪ್ರಮಾಣ ಹೆಚ್ಚಾದರೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ರೈಲ್ವೆ ಇಲಾಖೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿರುವುದರಿಂದ ಪ್ರಯಾಣಿಕರಿಗೆ ನಿರಾಳತೆ ದೊರೆತಿದೆ. ಶೀಘ್ರದಲ್ಲೇ ಪರಿಸ್ಥಿತಿ ಸಂಪೂರ್ಣ ಸಹಜಗೊಂಡ ಬಳಿಕ ಎಲ್ಲ ರೈಲುಗಳು ತಮ್ಮ ನಿಗದಿತ ವೇಳಾಪಟ್ಟಿಯಂತೆ ಪೂರ್ಣ ಪ್ರಮಾಣದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.