ಬೆಳಗಾವಿ, ಆಗಸ್ಟ್ 20 : ಬೆಳಗಾವಿಯ ಗೋಕಾಕ್ ತಾಲೂಕಿನ ಸಮೀಪದ ಬೆನಚಿಮರಡಿ ಗ್ರಾಮದ ಹೊಲದಲ್ಲಿ ಕಾನೂನುಬಾಹಿರವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತನೊಬ್ಬನನ್ನು ಗೋಕಾಕ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆನಚಿಮರಡಿ ಗ್ರಾಮದ ಅವಣ್ಣಾ ಸಿದ್ದಪ್ಪ ತಪಸಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಅಂದಾಜು 13 ಕೆಜಿ ತೂಕದ ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೊಲವೊಂದರಲ್ಲಿ ರಹಸ್ಯವಾಗಿ ಗಾಂಜಾ ಬೆಳೆಯಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಆದೇಶದಂತೆ, ಡಿವೈಎಸ್‌ಪಿ ರವಿ ನಾಯಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ ಅವರು ವಿಶೇಷ ತಂಡವನ್ನು ರಚಿಸಿದ್ದರು.
ಪಿಎಸ್‌ಐ ಕೆ.ಬಿ. ವಾಲಿಕರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಡಿ.ಜಿ. ಕೊಣ್ಣೂರ, ಚಂದ್ರು ಸಣ್ಣಕ್ಕಿ, ಮಹಾಂತ್ ಮನ್ನಿಕೇರಿ, ಬಿ.ವಿ. ನೇರ್ಲಿ, ಹನಮಂತ ಮಲ್ಲಾಡದವರ, ಹಣಮಂತ ಗೌಡಿ, ನಾಗೇಶ ದುರದುಂಡಿ ಹಾಗೂ ನಾಗಪ್ಪ ಬೆಳಗಲಿ ಅವರನ್ನೊಳಗೊಂಡ ತಂಡವು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಸಂಬಂಧ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.