ದೋಹಾ,ಕತಾರ್, ಆಗಸ್ಟ್ 30: ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರಾದ, ದೋಹಾ-ಕತಾರ್‌ನಲ್ಲಿ ನೆಲೆಸಿದ್ದ ಖ್ಯಾತ ಉದ್ಯಮಿ ಹಾಗೂ ಸಮುದಾಯ ಮುಖಂಡ ಫಯಾಜ್ ಅಹ್ಮದ್ (57) ಅವರು ರವಿವಾರ ದೋಹಾದಲ್ಲಿ ನಿಧನರಾಗಿದ್ದಾರೆ.
ಕಳೆದ 30 ವರ್ಷಗಳಿಂದ ಕತಾರ್‌ನ ಪ್ರಸಿದ್ಧ ಬಿನ್ ಓಮ್ರಾನ್ ಕಂಪನಿಯಲ್ಲಿ ಹಣಕಾಸು ವ್ಯವಸ್ಥಾಪಕರಾಗಿ (Finance Manager) ಅವರು ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಮೃದುಭಾಷಿ, ವಿನಯಶೀಲ ಹಾಗೂ ಗೌರವಾನ್ವಿತ ವ್ಯಕ್ತಿತ್ವದವರಾಗಿದ್ದ ಫಯಾಜ್ ಅಹ್ಮದ್ ಅವರು, ಕತಾರ್‌ನಲ್ಲಿರುವ ಹತ್ತು ಹಲವು ಭಾರತೀಯ ಸಮುದಾಯ ಸಂಘಟನೆಗಳು ಹಾಗೂ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರು ಕೆಎಂಸಿಎ (KMCA) ಕತಾರ್ ಮತ್ತು ಹಿದಾಯ ಫೌಂಡೇಶನ್ ಕತಾರ್ ಸೇರಿದಂತೆ ವಿವಿಧ ಪ್ರಮುಖ ಭಾರತೀಯ ಸಮುದಾಯ ಸಂಘಟನೆಗಳ ಅಧ್ಯಕ್ಷರಾಗಿ ಹಾಗೂ ಪದಾಧಿಕಾರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
ಅವರ ಅಕಾಲಿಕ ನಿಧನಕ್ಕೆ ಕತಾರ್‌ನ ಪ್ರಮುಖ ಸಮುದಾಯ ಮುಖಂಡರಾದ ಸಾಕಿಬ್ ರಝಾ ಖಾನ್, ಡಾ. ರವಿ ಶೆಟ್ಟಿ, ಅಶ್ಮತ್ ಅಲಿ, ಅಬ್ದುಲ್ಲಾ ಮೋನು, ವಿಜಯ್ ಕೆ., ತುಳುಕೂಟದ ಸ್ಥಾಪಕ ಸದಸ್ಯ ಎಂ. ಇಕ್ಬಾಲ್ ಮನ್ನಾ ಸೇರಿದಂತೆ ಅನೇಕ ಗಣ್ಯರು ತೀವ್ರ ಆಘಾತ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.