BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Ex Minister B C Nagesh nomore ಮಾಜಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಿಧನ, ಸಿಎಂಸಂತಾಪ

ತಿಪಟೂರು ಕ್ಷೇತ್ರದ ಮಾಜಿ ಶಾಸಕ ಮತ್ತು ರಾಜ್ಯದ ಮಾಜಿ ಶಿಕ್ಷಣ ಸಚಿವರೂ ಆದ ಬಿ.ಸಿ.ನಾಗೇಶ್ (65 ವರ್ಷ) ನಿಧನರಾಗಿದ್ದಾರೆ

ಬೆಂಗಳೂರು, ಆಗಸ್ಟ್ 19 : ತಿಪಟೂರು ಕ್ಷೇತ್ರದ ಮಾಜಿ ಶಾಸಕ ಮತ್ತು ರಾಜ್ಯದ ಮಾಜಿ ಶಿಕ್ಷಣ ಸಚಿವರೂ ಆದ ಬಿ.ಸಿ.ನಾಗೇಶ್ (65 ವರ್ಷ) ನಿಧನರಾಗಿದ್ದಾರೆ.  ಅವರು ಮಂಗಳವಾರ ರಾತ್ರಿ 9 ಗಂಟೆಗೆ ಬೆಂಗಳೂರಿನ ತಮ್ಮ ಮಗಳ ಮನೆಯಲ್ಲಿ ನಿಧರಾಗಿದ್ದಾರೆ. ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.  ಇಂದು ಬೆಳಗ್ಗೆ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಾರ್ಥಿವ ಶರೀರದ ದರ್ಶನ ವ್ಯವಸ್ಥೆ ಇರುತ್ತದೆ ಬಳಿಕ ಅಂತ್ಯ ಸಂಸ್ಕಾರವು ತಿಪಟೂರಿನಲ್ಲಿ ನೆರವೇರಲಿದೆ.

1959ರ ಜುಲೈ 1ರಂದು ಜನಿಸಿದ್ದ ಬಿ.ಸಿ. ನಾಗೇಶ್ ಅವರು ವಿದ್ಯಾರ್ಥಿ ಜೀವನದಲ್ಲೇ ABVP ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ಆನಂತರ ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರಾರಂಭಿಸಿದ್ದರು. 1984ರಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದರು. ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೇ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಸಿಎಂ ಡಿ ಕೆ ಶಿವಕುಮಾರ್ ಸಂತಾಪ

ಮಾಜಿ ಶಾಸಕ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ನಿಧನಕ್ಕೆ ಸಿಎಂ ಡಿ‌ ಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ."ಸರಳತೆಯಿಂದ ನಾಗೇಶ್ ಅವರು ಎಲ್ಲರ ಆಪ್ತರಾಗಿದ್ದರು.‌ ನೇರ ನಡೆ- ನುಡಿಗೆ ಹೆಸರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಶಾಸಕರಾಗಿ ಹಾಗೂ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ.

ಶಿಕ್ಷಣ ಕ್ಷೇತ್ರದ ಸುಧಾರಣೆ ಮತ್ತು ವಿದ್ಯಾರ್ಥಿಗಳ ಹಿತದ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದಯುತ ಸಂಬಂಧ ಕಾಪಾಡಿಕೊಂಡಿದ್ದರು.

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ದುಃಖತಪ್ತ ಕುಟುಂಬದ ಸದಸ್ಯರಿಗೆ, ಬಂಧುಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಮತ್ತು ಧೈರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಮ್ಮ‌ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಿ. ವೈ ವಿಜಯೇಂದ್ರ ಸಂತಾಪ

"ಪಕ್ಷದ ಹಿರಿಯ ನಾಯಕರು, ತಿಪಟೂರು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರೂ ಆದ ಬಿ.ಸಿ.ನಾಗೇಶ್ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ತೀವ್ರ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ. ಸರಳತೆ, ವೈಚಾರಿಕ ಬದ್ಧತೆ, ನಿಷ್ಠೆ ಹಾಗೂ ಜನಪರ ಕಾಳಜಿಯ ವ್ಯಕ್ತಿತ್ವದಿಂದಲೇ ಹೆಸರಾಗಿದ್ದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ಮಾಡಿರುವ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಮತ್ತು ಪಕ್ಷದ ಸಂಘಟನೆಗೆ ನೀಡಿದ ಕೊಡುಗೆ ಅಪಾರ. ಅವರ ನಿರ್ಗಮನದಿಂದ ನಮ್ಮ ಪಕ್ಷ ಹಾಗೂ ನಾಡು ಒಬ್ಬ ಸಜ್ಜನಿಕೆಯ ಜನಪ್ರತಿನಿಧಿ ಹಾಗೂ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!