ಮಂಗಳೂರು, ಆಗಸ್ಟ್ 29 : ಮಂಗಳೂರಿನ ಜಪ್ಪಿನಮೊಗರು–ಎಕ್ಕೂರು ಭಾಗದಲ್ಲಿ ಸ್ಕೈವಾಕ್ ನಿರ್ಮಿಸಿ, ಹೈಮಾಸ್ಟ್ ದೀಪ ಅಳವಡಿಸಬೇಕೆಂದು ಡಿವೈಎಫ್ಐ ಒತ್ತಾಯಿಸಿದೆ.
ರಾಷ್ಟ್ರೀಯ ಹೆದ್ದಾರಿ NH-66ರ ಜಪ್ಪಿನಮೊಗರು–ಎಕ್ಕೂರು ಭಾಗದಲ್ಲಿ ಪ್ರತಿನಿತ್ಯ ನೂರಾರು ಜನರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಹೆದ್ದಾರಿ ದಾಟಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತೀವೇಗವಾಗಿ ಸಂಚರಿಸುವ ವಾಹನಗಳ ನಡುವೆ ಹೆದ್ದಾರಿ ದಾಟುವುದು ಜೀವಕ್ಕೆ ಅಪಾಯಕಾರಿಯಾಗಿದ್ದು, ಪಾದಚಾರಿಗಳ ಸುರಕ್ಷತೆಗೆ ತಕ್ಷಣದ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಜಪ್ಪಿನಮೊಗರು ಜಂಕ್ಷನ್‌ನಲ್ಲಿಯೂ ರಾತ್ರಿ ವೇಳೆ ಸಮರ್ಪಕ ಹೈಮಾಸ್ಟ್ ದೀಪಗಳ ವ್ಯವಸ್ಥೆ ಇಲ್ಲದಿರುವುದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯವನ್ನು ಹೆಚ್ಚಿಸಿದೆ. ಬೆಳಕಿನ ಕೊರತೆಯಿಂದಾಗಿ ಈ ಭಾಗದಲ್ಲಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯೂ ಉಂಟಾಗಿದೆ. ಹೀಗಿದ್ದರೂ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ.
ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ವಿಳಂಬ ಮಾಡದೆ ಜಪ್ಪಿನಮೊಗರು–ಎಕ್ಕೂರು ಭಾಗದಲ್ಲಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ಸ್ಕೈವಾಕ್ (ಮೇಲ್ಸೇತುವೆ) ನಿರ್ಮಿಸಬೇಕು. ಜಪ್ಪಿನಮೊಗರು ಜಂಕ್ಷನ್ ಸೇರಿದಂತೆ ಅಗತ್ಯವಿರುವ ಸ್ಥಳಗಳಲ್ಲಿ ಸಮರ್ಪಕ ಹೈಮಾಸ್ಟ್ ದೀಪಗಳನ್ನು ತಕ್ಷಣ ಅಳವಡಿಸಬೇಕು. ಹೆದ್ದಾರಿ ದಾಟುವ ಸಂದರ್ಭದಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯವಾಗದಂತೆ ವೈಜ್ಞಾನಿಕ ಹಾಗೂ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಿವೈಎಫ್ಐ ಬಜಾಲ್ ವಿಭಾಗ ಸಮಿತಿ ಒತ್ತಾಯಿಸುತ್ತದೆ.
ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸಿ ಮತ್ತಷ್ಟು ಅಪಘಾತ ಹಾಗೂ ಪ್ರಾಣಹಾನಿ ಸಂಭವಿಸುವುದಕ್ಕೆ ಅವಕಾಶ ನೀಡದೆ, ಹೆದ್ದಾರಿ ಪ್ರಾಧಿಕಾರವು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಡಿವೈಎಫ್ಐ ಎಚ್ಚರಿಸಿದೆ. ಈ ಬಗ್ಗೆ ಡಿವೈಎಫ್ಐ ಬಜಾಲ್ ವಿಭಾಗ ಸಮಿತಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.