ಬೆಂಗಳೂರು, ಆಗಸ್ಟ್ 10 : ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಯಾವ ರೈತರೂ ಇಲ್ಲ, ತಮ್ಮ ಹುಡುಗನ ರಾಜಕೀಯ ಭವಿಷ್ಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. “ಬಿಡದಿ ಟೌನ್ ಶಿಪ್ ವಿರೋಧಿಸಿ ಬಿಜೆಪಿ- ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆಯಲ್ಲಿ ಯಾವ ರೈತರೂ ಇಲ್ಲ. ತಮ್ಮ ಮನೆಯ ಹುಡುಗನ (ನಿಖಿಲ್ ಕುಮಾರಸ್ವಾಮಿ) ರಾಜಕೀಯ ಭವಿಷ್ಯಕ್ಕಾಗಿ ಮಾಡುತ್ತಿರುವ ಹೋರಾಟ ಇದು” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಾಲೂರಿನಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಮಾಡುತ್ತಿರುವ ಪಾದಯಾತ್ರೆಯಲ್ಲಿ ದೇವೇಗೌಡರು ಭಾಗಿಯಾಗಿದ್ದಾರೆ ಎಂದು ಹೇಳಿದಾಗ “ಬೇರೆ ಕ್ಷೇತ್ರದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಪಾದಯಾತ್ರೆ ಕೈಗೊಂಡಿದ್ದಾರೆ. ಹೋರಾಟ ಮತ್ತು ಪ್ರತಿಭಟನೆ ಪ್ರಜಾಪ್ರಭುತ್ವದಲ್ಲಿ ಅವರಿಗಿರುವ ಹಕ್ಕು.ಅದನ್ನು ನಾನು ಬೇಡ ಎನ್ನುವುದಿಲ್ಲ” ಎಂದರು.
“ಅವರು ಮಾಡಿದ ಯೋಜನೆ ನಾವು ಮುಂದುವರಿಸಿದ್ದೇವೆ. ಅವರು 25 ಲಕ್ಷ ಪರಿಹಾರ ನೀಡುತ್ತೇವೆ ಎಂದಿದ್ದರು. ನಾವು 2.50 ಕೋಟಿಯಿಂದ 3 ಕೋಟಿ ರೂ.ವರೆಗೂ ಪರಿಹಾರ ನೀಡುತ್ತಿದ್ದೇವೆ” ಎಂದು ವಿವರಿಸಿದರು.
ನೈಸ್ ಹಾಗೂ ಬಿಡದಿ ಟೌನ್ ಶಿಪ್ ಯೋಜನೆಗೆ ಸಹಿ ಹಾಕಿದ್ದೇ ಅವರು
ನೈಸ್ ಮತ್ತು ಬಿಡದಿ ಯೋಜನೆ ಒಂದೇ ರೀತಿಯ ಯೋಜನೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರೆಡೂ ಯೋಜನೆಗಳಿಗೆ ಅವರೇ ಸಹಿ ಹಾಕಿದ್ದು ಅವರೇ. ನೈಸ್ ಯೋಜನೆ ಮಾಡಿದವರು ಯಾರು? ಅವರೇ ಮಾಡಿದ್ದು. ಆದರೆ ಅದರಿಂದ ಒಳ್ಳೇದಾಗಿದೆ. ರಸ್ತೆ ಆಗಿರುವುದರಿಂದ ಬೆಂಗಳೂರು ಇವತ್ತು ಉಳಿದುಕೊಂಡಿದೆ. ಅವರು ಮಾಡಿದ್ದು ತಪ್ಪು ಎಂದಲ್ಲ. ಆದರೆ ಅದರಲ್ಲಿ ಅವರ ಸ್ವಾರ್ಥವಿದೆ. ಅದನ್ನೆಲ್ಲಾ ಸಮಯ ಬಂದಾಗ ಮಾತನಾಡುವೆ" ಎಂದು ಪ್ರತಿಕ್ರಿಯಿಸಿದರು.
https://youtube.com/shorts/XHYlwvxOgAU?feature=share