BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

counterfeit drug racket in Bengaluru| ಬೆಂಗಳೂರು ಬಿಡದಿಯ ಫಾರ್ಮ್ ಹೌಸ್‌ನಲ್ಲಿ ನಕಲಿ ಔಷಧಿ ಜಾಲ ಭೇದಿಸಿದ FDA ಅಧಿಕಾರಿಗಳು: 4.91 ಕೋಟಿ ರೂ. ಮೌಲ್ಯದ ಸೊತ್ತು ವಶ, ಓರ್ವ ವಶಕ್ಕೆ..!


ಬೆಂಗಳೂರು, ಆಗಸ್ಟ್ 19: ಬೆಂಗಳೂರು ಹೊರವಲಯದ ರಾಮನಗರ ಜಿಲ್ಲೆಯ ಬಿಡದಿ ಬಳಿ ನಡೆಯುತ್ತಿದ್ದ ಬೃಹತ್ ನಕಲಿ ಔಷಧಿ ಜಾಲವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ (FDA) ಔಷಧ ಅಮಲುಜಾರಿ ವಿಭಾಗದ ಅಧಿಕಾರಿಗಳ ತಂಡ ಯಶಸ್ವಿಯಾಗಿ ಭೇದಿಸಿದೆ.

ಸ್ಥಳದಿಂದ ಬರೋಬ್ಬರಿ 4.91 ಕೋಟಿ ರೂ. ಮೌಲ್ಯದ ನಕಲಿ ಔಷಧಗಳು ಹಾಗೂ ಇತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಮಾಹಿತಿ ನೀಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಕುರುಬರಕೇರನಹಳ್ಳಿ (ನಂ. 34) ಗ್ರಾಮದ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಅಂತಾರಾಷ್ಟ್ರೀಯ ಔಷಧ ಕಂಪೆನಿಗಳ ಹೆಸರಿನಲ್ಲಿ ಕಾನೂನುಬಾಹಿರವಾಗಿ ಮರು-ಪ್ಯಾಕಿಂಗ್ ಮತ್ತು ಲೇಬಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಕಲಿ ಔಷಧಿ ದಂಧೆ ನಡೆಯುತ್ತಿದ್ದ ಈ ಫಾರ್ಮ್ ಹೌಸ್ ಸಿದ್ದಯ್ಯ ಎಂಬವರಿಗೆ ಸೇರಿದ್ದು, ಇದನ್ನು ದುಬೈಯಲ್ಲಿರುವ ಬೆಂಗಳೂರು ಮೂಲದ ಪ್ರಶಾಂತ್ ಎಂಬವರು ಲೀಸ್‌ಗೆ ಪಡೆದಿದ್ದರು. ಪ್ರಶಾಂತ್ ಅವರ ಸಂಬಂಧಿಕ ತೇಜಸ್ ಇದನ್ನು ನೋಡಿಕೊಳ್ಳುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭುದೇವ ಗೌಡ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಇತರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತರಿಸಿ, ಹೊಸ ಬಾಟಲಿಗಳಿಗೆ (Vials) ತುಂಬಿಸಲಾಗುತ್ತಿತ್ತು. ಬಳಿಕ ದುಬಾರಿ ಬಹುರಾಷ್ಟ್ರೀಯ ಕಂಪೆನಿಗಳ (MNC) ಹಾಗೂ ಆಮದು ಮಾಡಿಕೊಂಡ ಬ್ರಾಂಡ್‌ಗಳ ಹೆಸರಿನ ನಕಲಿ ಲೇಬಲ್ ಹಚ್ಚಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು.  ಆಸ್ಪತ್ರೆಗಳ ತುರ್ತು ನಿಗಾ ಘಟಕದಲ್ಲಿ (ICU) ಬಳಸುವ ಜೀವ ರಕ್ಷಕ ಔಷಧಿಗಳನ್ನೂ ಸಹ ನಕಲಿಯಾಗಿ ತಯಾರಿಸಿ, ನಕಲಿ ಲೇಬಲ್ ಅಂಟಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ನಕಲಿ ಔಷಧಿಗಳಲ್ಲಿ ಯಾವುದೇ ಸಕ್ರಿಯ ಔಷಧೀಯ ಅಂಶಗಳು ಇರಲಿಲ್ಲ ಬದಲಿಗೆ ಹಾನಿಕಾರಕ ಪದಾರ್ಥಗಳಿದ್ದವು. ಇವುಗಳಲ್ಲಿರುವ ಸ್ಕ್ಯಾನಿಂಗ್ ಕೋಡ್‌ಗಳು ಕೂಡ ಕಾರ್ಯನಿರ್ವಹಿಸುತ್ತಿರಲಿಲ್ಲ.

ಅಂತರ್‌ರಾಜ್ಯ ನಂಟು:

ಈ ಜಾಲವು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಕಲಿ ಔಷಧಿಗಳನ್ನು ತಯಾರಿಸಿ, ಅವುಗಳನ್ನು ಕರ್ನಾಟಕಕ್ಕೆ ತಂದು ಎಂಎನ್‌ಸಿ ಲೇಬಲ್ ಹಾಕಿ ವೈದ್ಯಕೀಯ ಮಳಿಗೆಗಳು ಹಾಗೂ ಆಸ್ಪತ್ರೆಗಳಿಗೆ ವಿತರಿಸಲಾಗುತ್ತಿರುವುದು ತನಿಖೆಯಿಂದ ಬಯಲಾಗಿದೆ.

ಪ್ರಸ್ತುತ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಔಷಧ ಮತ್ತು ಪೊಲೀಸ್ ಇಲಾಖೆಯು ಜಂಟಿಯಾಗಿ ತನಿಖೆ ಮುಂದುವರೆಸಿದ್ದು, ಈ ಜಾಲದ ಕುರಿತು ತೆಲಂಗಾಣ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳಿಗೂ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!