ಬೊಗೋಟಾ, ಆಗಸ್ಟ್ 11 : ದಕ್ಷಿಣ ಅಮೇರಿಕಾದ ದೇಶವಾದ ಕೊಲಂಬಿಯಾದಲ್ಲಿ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದೆ. 570ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ ನೂರಾರು ಜನ ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಬೊಗೋಟಾದಿಂದ ಪಶ್ಚಿಮಕ್ಕೆ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಿಂದ ಪೂರ್ವಕ್ಕೆ ಸುಮಾರು 3 ಮೈಲಿ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 107 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕಂಪನಗಳು ನೆರೆಯ ಈಕ್ವೆಡಾರ್‌ಗೂ ಅನುಭವವಾಗಿವೆ. ಭೂಕಂಪದ ತೀವ್ರತೆಗೆ ಹತ್ತಾರು ಕಟ್ಟಡಗಳು ಮತ್ತು ವಸತಿ ಸಮುಚ್ಚಯಗಳು ನೆಲಸಮವಾಗಿವೆ. ಚೋಕೋ ಪ್ರಾಂತ್ಯದ ರಾಜಧಾನಿ ಕ್ವಿಬ್ಡೋ ಮತ್ತು ಕ್ಯಾಲಿ ನಗರಗಳಲ್ಲಿ ಹಲವಾರು ಕಟ್ಟಡಗಳು ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವ ಭೀತಿ ಎದುರಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಪೆರೈರಾ, ಮನಿಝಾಲೆಸ್, ಕ್ವಿಬ್ಡೋ ಸೇರಿದಂತೆ ಆರು ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ವಿಮಾನ ಯಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸರ್ಕಾರ ದೇಶಾದ್ಯಂತ ರಾಷ್ಟ್ರೀಯ ವಿಪತ್ತು ಘೋಷಿಸಿದೆ. ಪೆರೇರಾ ನಗರವೊಂದರಲ್ಲೇ 60 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 86 ಕಟ್ಟಡಗಳು ಕುಸಿದಿದ್ದು, ಏಳು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
https://x.com/Top_Disaster/status/2086827282946290068/video/1
ಭೂಕಂಪದಿಂದ ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ತುರ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕುಸಿದ ಕಟ್ಟಡಗಳ ಪೈಕಿ ಕಾಲಿ ನಗರದ ಆಸ್ಪತ್ರೆಯ ಮಕ್ಕಳ ವಿಭಾಗ ಹಾಗೂ ನವಜಾತ ಶಿಶುಗಳ ಆರೈಕೆ ವಿಭಾಗವೂ ಸೇರಿವೆ. ಭೂಕಂಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೈನಿಕರನ್ನು ಪೀಡಿತ ಪ್ರದೇಶಗಳಿಗೆ ನಿಯೋಜಿಸಿದೆ. ಈ ಪ್ರಬಲ ಭೂಕಂಪದ ಆಘಾತ ನೆರೆರಾಷ್ಟ್ರಗಳಾದ ಈಕ್ವೆಡಾರ್, ಪನಾಮಾ ಮತ್ತು ವೆನೆಜುವೆಲಾ ದೇಶಗಳ ಗಡಿ ಭಾಗಗಳಲ್ಲೂ ದಾಖಲಾಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.