BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Clean Bengaluru ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಚಾಲನೆ



ಬೆಂಗಳೂರು, ಆಗಸ್ಟ್ 01 : ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಬೆಂಗಳೂರನ್ನು ನಿರ್ಮಿಸುವ ಉದ್ದೇಶದಿಂದ, ಇಂದು ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿಎಂ ಡಿ ಕೆ ಶಿವಕುಮಾರ್ ಅವರು, ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡರೊಂದಿಗೆ ʻತ್ಯಾಜ್ಯದಿಂದ ಸ್ವಾತಂತ್ರ್ಯʼ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಇಂಧನ ಸಚಿವರಾದ ಕೆ.ಜೆ ಜಾರ್ಜ್‌, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಶ್ರ ಎಸ್‌.ಆರ್‌ ವಿಶ್ವನಾಥ್‌ ಹಾಗೂ ಎ.ಸಿ ಶ್ರೀನಿವಾಸ್‌, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್‌ ರಾವ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಈ ಅಭಿಯಾನದಡಿ ಕಟ್ಟಡ ನಿರ್ಮಾಣ ತ್ಯಾಜ್ಯ, ಘನ ತ್ಯಾಜ್ಯ, ಹಳೆಯ ವಿದ್ಯುತ್ ಕಂಬಗಳು, ಪೈಪ್‌ಗಳು, ಮಣ್ಣಿನ ಗುಡ್ಡೆಗಳು, ಬೆಳೆದು ನಿಂತ ಕಳೆಗಿಡಗಳು ಹಾಗೂ ಮರದ ಕೊಂಬೆಗಳು ಸೇರಿದಂತೆ ಒಟ್ಟು 22,372 ಟನ್‌ಗಳಷ್ಟು ತ್ಯಾಜ್ಯವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು, ಪಾದಚಾರಿ ಮಾರ್ಗಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಸಾರ್ವಜನಿಕರ ಸಹಕಾರದೊಂದಿಗೆ ತ್ಯಾಜ್ಯ ಮುಕ್ತ ಬೆಂಗಳೂರನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ನುಡಿದರು.


“ಬಿಡಿಎ ಆಗಲಿ, ಕಾರ್ಪೊರೇಷನ್ ನಿವೇಶನವಾಗಲಿ ಅದರ ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೀಗಾಗಿ ನಿವೇಶನ ಪಡೆದ 5 ವರ್ಷದೊಳಗೆ ಅಲ್ಲಿ ಮನೆ ನಿರ್ಮಾಣ ಮಾಡಬೇಕು. ಕಟ್ಟದಿದ್ದರೆ, ಅದಕ್ಕೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ಹಿಂಪಡೆಯಲಾಗುವುದು. ಮನೆ ಕಟ್ಟದೇ ಖಾಲಿ ಇಟ್ಟುಕೊಂಡರೆ ಅಲ್ಲಿ ಕಸದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಈ ತೀರ್ಮಾನ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮನೆ ಕಟ್ಟದಿದ್ದರೆ ನಿವೇಶನ ವಾಪಸ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ, “ಬೇರೆ ವಿಧಿಯಿಲ್ಲ, ನಾವು ಇದನ್ನು ಮಾಡಲೇಬೇಕಾಗುತ್ತದೆ. ನಾವು ನಿವೇಶನ ನೀಡುವುದು ಮನೆ ಕಟ್ಟಿಕೊಳ್ಳಲು. ಕೆಲವರು 20, 30, 40 ವರ್ಷವಾದರೂ ಮನೆ ಕಟ್ಟಿಲ್ಲ. ಅವರು ಕಟ್ಟಿರುವ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡಿ ನಿವೇಶನ ಹಿಂಪಡೆಯಲಾಗುವುದು. ಸಿಐಟಿಬಿ, ಬಿಡಿಎ, ಸೊಸೈಟಿಗಳಿಂದ ನಿವೇಶನ ಪಡೆದ ಮೇಲೆ ಮನೆ ಕಟ್ಟಬೇಕಾಗಿರುವುದು ಅವರ ಕರ್ತವ್ಯ. ನಿವೇಶನಕ್ಕೆ ಕಾಪೌಂಡ್ ಕೂಡ ಹಾಕದೇ, ಕಸ ಹಾಕಲು ಅವಕಾಶ ಕೊಟ್ಟರೆ ಹೇಗೆ? ಅವರ ಜಾಗದಲ್ಲಿ ಅವರು ಕಸ ಹಾಕದೇ ಇದ್ದರೂ, ಅವರ ಜಾಗವನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು” ಎಂದು ತಿಳಿಸಿದರು. “ಮಹಾತ್ಮಾ ಗಾಂಧೀಜಿ ಅವರು ಸ್ವಚ್ಛತೆಯೇ ದೇವರು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನಿಮ್ಮ ಮನೆ ಮುಂದೆ ಸ್ನಚ್ಛತೆ ಕಾಪಾಡಿದರೆ, ಬೀದಿ ಸ್ವಚ್ಛವಾಗುತ್ತದೆ. ಬೀದಿ ಸ್ವಚ್ಛವಾದರೆ ಊರು ಸ್ವಚ್ಛವಾಗುತ್ತದೆ, ಊರು ಸ್ವಚ್ಛವಾದರೆ ನಾಡು ಸ್ವಚ್ಛವಾಗುತ್ತದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಸ್ವಚ್ಛತೆ ನಮ್ಮ ಕರ್ತವ್ಯ. ನಿಮ್ಮ ಬೆಂಗಳೂರನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ” ಎಂದರು. ಎಲ್ಲೆಂದರಲ್ಲಿ ಕಸ ಸುರಿಯುವ ವಾಹನ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳಿ “ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಬೆಂಗಳೂರು ನಿಮ್ಮ ಆಸ್ತಿ. ಇದನ್ನು ಕಾಪಾಡಲು ಅಭಿಯಾನ ಆರಂಭಿಸಿದ್ದೇವೆ. ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವ ವಾಹನಗಳಿಗೆ ನೋಟೀಸ್ ಕೊಡಲಾಗಿತ್ತು. ಕ್ಯಾಮೆರಾ ಕಣ್ಗಾವಲು ಇಡಲಾಗಿತ್ತು. ಈಗ ಮತ್ತೆ ಯತಾಸ್ಥಿತಿಯಲ್ಲಿ ಕಸ ಸುರಿಯುತ್ತಿದ್ದಾರೆ. ಅನುಮತಿ ಇಲ್ಲದೇ ಕಸ ಸುರಿಯುವವರ ವಾಹನವನ್ನು ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳಿ ಎಂದು ನಾನು ಪೊಲೀಸರಿಗೆ ನಿರ್ದೇಶನ ನೀಡುತ್ತಿದ್ದೇನೆ. ಜನರಲ್ಲಿ ನಾವು ನಾಗರಿಕ ಪ್ರಜ್ಞೆ ತರಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು. “ಹಸಿರಿನ ವಿಚಾರವಾಗಿ ನನ್ನಲ್ಲಿ ವಿಭಿನ್ನ ಆಲೋಚನೆ ಇದೆ. ಅದನ್ನು ಈಗ ನಾನು ಪ್ರಸ್ತಾಪ ಮಾಡುವುದಿಲ್ಲ, 100 ದಿನಗಳ ಕಾರ್ಯಕ್ರಮದ ವೇಳೆ ಪ್ರಕಟ ಮಾಡುತ್ತೇವೆ. ಬೆಂಗಳೂರು ಸ್ವಚ್ಛತೆ ಬಗ್ಗೆ ಟೀಕೆ ಟಿಪ್ಪಣಿ ಬರುತ್ತಿವೆ. ನಾವು ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಟೀಕೆಗಳು ಸಾಯುತ್ತವೆ. ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿದೆ. ಯಾರಾದರೂ ಇದನ್ನು ಅಧಿಕಾರಿಗಳ ಮೇಲೆ ದಾಳಿ ಎಂದು ಭಾವಿಸಿದ್ದರೆ ಅದು ಭ್ರಮೆ. ಇದು ಸರ್ಕಾರ, ಸಚಿವರು ಹಾಗೂ ಶಾಸಕರ ಮೇಲಿನ ದಾಳಿ ಎಂದೇ ಭಾವಿಸುತ್ತೇವೆ. ನಾವು ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು. “ಬೀದಿವ್ಯಾಪಾರದವರಿಗೆ ಬೇರೆ ಜಾಗಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಬೀದಿ ವ್ಯಾಪಾರಿಗಳು ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡಲು ಸಾಧ್ಯವಿಲ್ಲ. ಇಂದಿನಿಂದ ಆರಂಭವಾಗುತ್ತಿರುವ ಈ ಅಭಿಯಾನ ಬೆಂಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ. ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿ ಈ ಅಭಿಯಾನ ಕೈಗೆತ್ತಿಕೊಳ್ಳಬೇಕು. ಇದು ನಿಮ್ಮ ಬೆಂಗಳೂರು, ಇಡೀ ದೇಶ ನಿಮ್ಮನ್ನು ಗಮನಿಸುತ್ತಿದೆ. ಅನೇಕ ರಾಷ್ಟ್ರೀಯ ನಾಯಕರು ಅನೇಕ ಮಾರ್ಗದರ್ಶನ ನೀಡಿದ್ದು, ಅದನ್ನು ಮುಂದುವರಿಸಿಕೊಂಡು ಹೋಗೋಣ” ಎಂದರು. ಎನ್ ಜಿಒ, ಸಂಘ ಸಂಸ್ಥೆಗಳು ನಾಲ್ಕೈದು ರಸ್ತೆ ಜವಾಬ್ದಾರಿ ಪಡೆದು ಸ್ವಚ್ಛತೆ ಕಾಪಾಡಬಹುದು “ದೇಶದ ಎಲ್ಲಾ ನಗರಗಳಲ್ಲೂ ಈ ಕಸ ಹಾಕುವ ಸಮಸ್ಯೆ ಇದೆ. ಬೆಂಗಳೂರಿನಲ್ಲಿ ಕಸದ ವಿಚಾರವಾಗಿ ಕಾರ್ಯಕ್ರಮ ಮಾಡಿ ಅನೇಕ ವರ್ಷಗಳಾಗಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಹೊಸ ರೂಪ ನೀಡುತ್ತಿದ್ದೇವೆ. ಎನ್ ಜಿಒಗಳು, ಸಂಘ ಸಂಸ್ಥೆಗಳು ಒಂದೊಂದು ಪ್ರದೇಶದ ಜವಾಬ್ದಾರಿ ಹೊತ್ತುಕೊಂಡರೆ ನಾನು ಸ್ವಾಗತಿಸುತ್ತೇನೆ. ನಾಲ್ಕು ರಸ್ತೆ ಜವಾಬ್ದಾರಿ ತೆಗೆದುಕೊಂಡು ಬಂದರೆ ಸಾಕು. ಈ ಅಭಿಯಾನಕ್ಕೆ ನಾಗರಿಕರ ಸಹಕಾರ ಬೇಕು” ಎಂದು ತಿಳಿಸಿದರು.




📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!