BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Civic worker who comes in a luxury Fortuner car and sweeps the streets in Bantwal ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಬಂದು ಹಾದಿ ಬೀದಿ ಗುಡಿಸುವ ಪೌರಕಾರ್ಮಿಕ: ಬಂಟ್ವಾಳದ ಸರಳ ಜೀವಿಯ ಹೈಫೈ ಕತೆಯಿದು..!


ಬಂಟ್ವಾಳ, ಆಗಸ್ಟ್ 28 : ಬೆಳಗ್ಗಿನ ಜಾವ 5 ಗಂಟೆಗೆ ಇಡೀ ಬಿ.ಸಿ.ರೋಡ್ ಪಟ್ಟಣ ಇನ್ನೂ ನಿದ್ರೆಯಿಂದ ಎಚ್ಚರಗೊಳ್ಳುವಷ್ಟರಲ್ಲಿ, ವ್ಯಕ್ತಿಯೊಬ್ಬರು ತಮ್ಮ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಬಂದು ಇಳಿಯುತ್ತಾರೆ. ಕಾರಿನಿಂದ ಇಳಿದ ತಕ್ಷಣವೇ ಹಿಂದಿನ ಬಾಗಿಲು ತೆರೆದು ಪೊರಕೆ ತೆಗೆದುಕೊಂಡು ರಸ್ತೆ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ನಿತ್ಯದ ಕಾಯಕದ ಸ್ಪೂರ್ತಿದಾಯಕ ಚಿತ್ರಣ.

ಪ್ರತಿದಿನ ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಿ.ಸಿ.ರೋಡ್‌ನ ವಿವಿಧ ಭಾಗಗಳಲ್ಲಿ ರಸ್ತೆ ಗುಡಿಸುವ ಕಾರ್ಯ ನಿರ್ವಹಿಸುವ ಸೇಸಪ್ಪ, ತ್ಯಾಜ್ಯ ವಿಲೇವಾರಿ ವಾಹನದ ಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 

ಆದರೆ  ಇತ್ತೀಚೆಗೆ ಅವರು ತಮ್ಮ ಸ್ವಂತ ಐಷರಾಮಿ ಫಾರ್ಚೂನರ್ ಕಾರಿನಲ್ಲೇ ಕೆಲಸಕ್ಕೆ ಹಾಜರಾಗುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದ್ದು, ಸ್ಥಳೀಯವಾಗಿ ಭಾರಿ ವೈರಲ್ ಆಗಿದ್ದಾರೆ.

ಕಷ್ಟದಿಂದ ಮೇಲೆ ಬಂದ ಪಯಣ: 

1996ರಲ್ಲಿ ಕೇವಲ 50 ರೂ. ದಿನಗೂಲಿಗೆ ಪೌರಕಾರ್ಮಿಕರಾಗಿ ಸೇರಿದ್ದ ಸೇಸಪ್ಪ, ಬಳಿಕ ಖಾಯಂ ನೌಕರರಾದರು.  ಕೇವಲ 3ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಇವರು, ಜೀವನದಲ್ಲಿ ಯಶಸ್ಸು ಗಳಿಸಲು ಶಿಕ್ಷಣಕ್ಕಿಂತ ನಿರಂತರ ಪರಿಶ್ರಮ ಮತ್ತು ದೃಢಸಂಕಲ್ಪವೇ ಮುಖ್ಯ ಎಂಬುದನ್ನು ಯಶಸ್ವಿಯಾಗಿ ನಿರೂಪಿಸಿದ್ದಾರೆ.

ಕಾರಿನ ಮೇಲೆ ಭಾರಿ ಒಲವು ಹಾಗೂ ಐಷಾರಾಮಿ ವಾಹನ ಖರೀದಿ:

ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸೇಸಪ್ಪ, ಮೊದಲು ಸಣ್ಣ ಕಾರೊಂದನ್ನು ಖರೀದಿಸಿದ್ದರು. ನಂತರ ಹಂತ ಹಂತವಾಗಿ ಆಲ್ಟೋ, ಓಮಿನಿ, ಸ್ವಿಫ್ಟ್ ಹಾಗೂ ಸ್ಕಾರ್ಪಿಯೋ ಕಾರುಗಳನ್ನು ಬಳಸಿದ್ದರು.ಇದೀಗ ದೈವನರ್ತಕನಾಗಿ ಸೇವೆ ಸಲ್ಲಿಸುತ್ತಿರುವ ತಮ್ಮ ಪುತ್ರನ ಇಷ್ಟದಂತೆ ಕೇವಲ 10 ದಿನಗಳ ಹಿಂದಷ್ಟೇ ಈ ನೂತನ ಫಾರ್ಚೂನರ್ ಕಾರನ್ನು ಖರೀದಿಸಿದ್ದು, ಪ್ರಸ್ತುತ ಅದೇ ಕಾರಿನಲ್ಲಿ ಬಂದು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. 

ಇಂದು ಆರ್ಥಿಕವಾಗಿ ಸಶಕ್ತರಾಗಿದ್ದರೂ ಸೇಸಪ್ಪ ಅವರ ಆರಂಭದ ದಿನಗಳ ಬದುಕು ಸುಲಭವಾಗಿರಲಿಲ್ಲ. ತಂದೆಯ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ, ಸಹಾಯಕ್ಕೆ ಯಾರೂ ಬಾರದಿದ್ದಾಗ ತಾವೇ ಖುದ್ದಾಗಿ ನೇತ್ರಾವತಿ ನದಿ ತೀರದಲ್ಲಿ ಮೃತದೇಹದ ಸಂಸ್ಕಾರ ನೆರವೇರಿಸಿದ್ದ ಕಹಿ ನೆನಪನ್ನು ಅವರು ಭಾವುಕರಾಗಿ ಮೆಲಕುಹಾಕುತ್ತಾರೆ. ಸವಾಲುಗಳನ್ನು ಎದುರಿಸಿ ಮೇಲೆ ಬಂದಿರುವ ಅವರು, ಪ್ರಸ್ತುತ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಅತ್ಯಂತ ಸುಖಿ ಜೀವನ ನಡೆಸುತ್ತಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!