ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಕ್ಷರ ದಾಸೋಹ ಸಿಬ್ಬಂದಿ ಅಡುಗೆ ಮಾಡುವ ವೇಳೆ ವಿದ್ಯುತ್ ಚಾಲಿತ ತುರಿಮಣೆಗೆ ಆಕಸ್ಮಿಕವಾಗಿ ಅವರ ಕೈಬೆರಳು ಸಿಲುಕಿಕೊಂಡಿದೆ. ನೋವಿನಿಂದ ಅವರು ಬೊಬ್ಬೆ ಹಾಕಿ ಕಿರುಚಿಕೊಂಡಿದ್ದಾರೆ.
ಶೌಚಾಲಯಕ್ಕೆ ತೆರಳುತ್ತಿದ್ದ 5ನೇ ತರಗತಿ ಬಾಲಕ ಮನ್ವಿತ್, ಅಡುಗೆ ಕೋಣೆಯಿಂದ ಬಂದ ಅಳುವಿನ ಶಬ್ದವನ್ನು ಕೇಳಿ ತಕ್ಷಣವೇ ಒಳಗೆ ಓಡಿಬಂದಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮನ್ವಿತ್, ಕ್ಷಣಮಾತ್ರದಲ್ಲೂ ತಡಮಾಡದೆ ವಿದ್ಯುತ್ ಸ್ವಿಚ್ ಆಫ್ ಮಾಡಿದ್ದಾನೆ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
''ಹುಡುಗ ದೇವರಂತೆ ಬಂದು ಕಾಪಾಡಿದ'' ಎಂದು ಬಿಸಿಯೂಟದ ಸಿಬ್ಬಂದಿ ಕಣ್ಣೀರಿಡುತ್ತಾ ಮನ್ವಿತ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಾಲಕನ ಈ ಧೈರ್ಯ ಹಾಗೂ ಸಮಯಪ್ರಜ್ಞೆಯನ್ನು ಶಾಲೆಯ ಮುಖ್ಯಸ್ಥರು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಸೇರಿದಂತೆ ಸ್ಥಳೀಯರು ಶ್ಲಾಘಿಸಿದ್ದಾರೆ.
ಮನ್ವಿತ್‌ನ ಈ ಮಾನವೀಯ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಎಂ ಡಿ.ಕೆ. ಶಿವಕುಮಾರ್, 'ಮನ್ವಿತ್‌ನ ಸಮಯಪ್ರಜ್ಞೆ ಮತ್ತು ಧೈರ್ಯ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಬಾಲಕನ ಒಂದು ಕ್ಷಣದ ಜಾಗರೂಕತೆ ದೊಡ್ಡ ಅಪಾಯವನ್ನು ತಪ್ಪಿಸಿದೆ' ಎಂದು ಎಕ್ಸ್‌ನಲ್ಲಿ ಬರೆದುಕೊಂಡು ಅಭಿನಂದಿಸಿದ್ದಾರೆ.