ಉದ್ಯೋಗಕ್ಕಾಗಿ ಭವಿಷ್ಯದ ಸ್ಪರ್ಧೆ ಮನುಷ್ಯರೊಂದಿಗಲ್ಲ, 'ಎಐ' ಜೊತೆಗೆ: ಎನ್‌ಐಟಿಕೆ ನೂತನ ವಿದ್ಯಾರ್ಥಿಗಳಿಗೆ ನಿರ್ದೇಶಕರ ಕಿವಿಮಾತು
ಸುರತ್ಕಲ್ , ಆಗಸ್ಟ್ 19: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸುರತ್ಕಲ್‌ನಲ್ಲಿ ಬುಧವಾರ 2026–2030ನೇ ಸಾಲಿನ ನೂತನ ಬಿ.ಟೆಕ್ ವಿದ್ಯಾರ್ಥಿಗಳ ಪ್ರವೇಶೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು. ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 1,066 ವಿದ್ಯಾರ್ಥಿಗಳು (834 ವಿದ್ಯಾರ್ಥಿಗಳು ಹಾಗೂ 232 ವಿದ್ಯಾರ್ಥಿನಿಯರು) ಎನ್‌ಐಟಿಕೆಗೆ ಹೆಜ್ಜೆ ಇಟ್ಟಿದ್ದಾರೆ.
ಉಪ ನಿರ್ದೇಶಕ ಪ್ರೊ. ಸುಭಾಷ್ ಯರಗಲ್ ಅವರು ಹೊಸ ಬ್ಯಾಚ್‌ಗೆ ಅಭಿನಂದನೆ ಸಲ್ಲಿಸಿದರು. “ನಮ್ಮ ವಿದ್ಯಾರ್ಥಿಗಳು ನಾಳೆಯ ಜವಾಬ್ದಾರಿಯುತ ನಾಗರಿಕರು ಮತ್ತು ಕೈಗಾರಿಕಾ ವೃತ್ತಿಪರರಾಗುತ್ತಾರೆ ಎಂಬುದು ನಮ್ಮ ಹೆಮ್ಮೆ. ಸಂಸ್ಥೆಯ ಮಂತ್ರವಾಕ್ಯದಂತೆ, ‘ಕಾಯಕವೇ ಕೈಲಾಸ’,” ಎಂದು ಹೇಳಿದರು. ತಮ್ಮ ಮೂರು ದಶಕಗಳ ಎನ್‌ಐಟಿಕೆ ಪ್ರಯಾಣವನ್ನು ನೆನಪಿಸಿಕೊಂಡ ಅವರು, ಇಂದು ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಸೌಲಭ್ಯಗಳು ಲಭ್ಯವಿರುವುದನ್ನು ವಿವರಿಸಿದರು.
'ಎಐ' ಮೀರಿಸಲು ಬಲ-ಮೆದುಳಿನ ಸಾಮರ್ಥ್ಯ ಬೆಳೆಸಿಕೊಳ್ಳಿ: ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ, ಭವಿಷ್ಯದ ತಂತ್ರಜ್ಞಾನ ಮತ್ತು ಉದ್ಯೋಗ ಮಾರುಕಟ್ಟೆಯ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದರು.
"2030ರ ಹೊತ್ತಿಗೆ ಉದ್ಯೋಗಕ್ಕಾಗಿ ನಿಮ್ಮ ನಿಜವಾದ ಸ್ಪರ್ಧೆ ಸಹಪಾಠಿಗಳಿಗಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆ (AI) ಯೊಂದಿಗೆ ಇರಲಿದೆ. ಓದುವುದು, ಬರೆಯುವುದು ಮತ್ತು ಅನುವಾದಿಸುವಂತಹ 'ಎಡ-ಮೆದುಳಿನ' ತಾರ್ಕಿಕ ಸಾಮರ್ಥ್ಯಗಳಲ್ಲಿ ಎಐ ಈಗಾಗಲೇ ಮನುಷ್ಯನನ್ನು ಮೀರಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಕುತೂಹಲ, ಸೃಜನಶೀಲತೆ, ಸಹಾನುಭೂತಿ, ನೀತಿಶಾಸ್ತ್ರ, ಭಾವನೆ ಮತ್ತು ಮೌಖಿಕ ಸಂವಹನದಂತಹ 'ಬಲ-ಮೆದುಳಿನ' ಸಾಮರ್ಥ್ಯಗಳನ್ನು ಬೆಳೆಸಿಕೊಂಡು ಭವಿಷ್ಯದ ಜಗತ್ತಿನಲ್ಲಿ ಯಶಸ್ವಿಯಾಗಬೇಕು" ಎಂದು ಕರೆ ನೀಡಿದರು.
ಪ್ರೊ. ರವಿ ಅವರು ಸಂಸ್ಥೆಯ ಹೊಸ ಪಠ್ಯಕ್ರಮವನ್ನು ಪರಿಚಯಿಸಿದರು. ಕಳೆದ ಮೂರು ವರ್ಷಗಳಲ್ಲಿ ರೂಪುಗೊಂಡ ಈ ಪಠ್ಯಕ್ರಮವು ಮಾನವೀಯ ಸಾಮರ್ಥ್ಯಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಸಿದ್ಧಾಂತ ಮತ್ತು ಪ್ರಯೋಗಾಲಯ ಪಾಠಗಳ ಜೊತೆಗೆ, ವಿದ್ಯಾರ್ಥಿಗಳು ನಾಲ್ಕು ವಿಭಾಗಗಳ ಜೀವನ ಕೌಶಲ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕಿದೆ — ದೈಹಿಕ (ಕ್ರೀಡೆ), ಸಾಂಸ್ಕೃತಿಕ (ಸೃಜನಾತ್ಮಕ ಕಲೆ), ತಾಂತ್ರಿಕ (ಮಾದರಿ ತಯಾರಿಕೆ) ಮತ್ತು ವೃತ್ತಿಪರ (ಸಂವಹನ) ಎಂದರು.
'ಕಾಯಕವೇ ಕೈಲಾಸ' ನಮ್ಮ ಮಂತ್ರ: ಉಪ ನಿರ್ದೇಶಕ ಪ್ರೊ. ಸುಭಾಷ್ ಯರಗಲ್ ನೂತನ ಬ್ಯಾಚ್‌ಗೆ ಶುಭಕೋರಿ, "ನಮ್ಮ ವಿದ್ಯಾರ್ಥಿಗಳು ಭವಿಷ್ಯದ ಜವಾಬ್ದಾರಿಯುತ ನಾಗರಿಕರು ಹಾಗೂ ವೃತ್ತಿಪರರು ಎಂಬುದು ನಮಗೆ ಹೆಮ್ಮೆ. 'ಕಾಯಕವೇ ಕೈಲಾಸ' ಎಂಬುದು ನಮ್ಮ ಸಂಸ್ಥೆಯ ಮಂತ್ರ. ಮೂರು ದಶಕಗಳ ಹಿಂದೆ ಹೋಲಿಸಿದರೆ ಇಂದು ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಸೌಲಭ್ಯಗಳು ಕ್ಯಾಂಪಸ್‌ನಲ್ಲಿ ಲಭ್ಯವಿವೆ. ಇವುಗಳ ಸದುಪಯೋಗ ಪಡಿಸಿಕೊಳ್ಳಿ" ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಡೀನ್‌ಗಳು, ಮುಖ್ಯ ವಾರ್ಡನ್ ಹಾಗೂ ಇತರ ಅಧಿಕಾರಿಗಳು ಎನ್‌ಐಟಿಕೆ ಶೈಕ್ಷಣಿಕ ರಚನೆ, ಕ್ಯಾಂಪಸ್ ಸೌಲಭ್ಯಗಳು ಮತ್ತು ಸಂಶೋಧನಾ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ನೀಡಿದರು.
ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ: ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದ 1,500ಕ್ಕೂ ಹೆಚ್ಚು ಪೋಷಕರಿಗಾಗಿ ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೋಷಕರಿಗೆ ಕ್ಯಾಂಪಸ್ ಸೌಲಭ್ಯಗಳ ಪರಿಚಯ ಮಾಡಿಕೊಟ್ಟ ಅಧಿಕಾರಿಗಳು, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರು ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಹಾಗೂ ಪಾಲುದಾರರಾಗುವಂತೆ ಮನವಿ ಮಾಡಿದರು.
ಜೀವನ ಕೌಶಲ್ಯಗಳಿಗೆ ಒತ್ತು: ಕೇವಲ ಸಿದ್ಧಾಂತ ಮತ್ತು ಪ್ರಯೋಗಾಲಯಕ್ಕೆ ಸೀಮಿತವಾಗದೆ ದೈಹಿಕ (ಕ್ರೀಡೆ), ಸಾಂಸ್ಕೃತಿಕ (ಕಲೆ), ತಾಂತ್ರಿಕ (ಮಾದರಿ ತಯಾರಿಕೆ) ಮತ್ತು ವೃತ್ತಿಪರ (ಸಂವಹನ) ಚಟುವಟಿಕೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಉದ್ಯಮಶೀಲತೆಗೆ ಪ್ರೋತ್ಸಾಹ: ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಕರ್ತರಾಗಬೇಕು. ಮುಂದಿನ 4 ವರ್ಷಗಳಲ್ಲಿ ಕ್ಯಾಂಪಸ್‌ನಲ್ಲಿ ಕನಿಷ್ಠ 100 ನೂತನ ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಳ್ಳಬೇಕು ಎಂಬ ಗುರಿಯನ್ನು ನಿರ್ದೇಶಕರು ನಿಗದಿಪಡಿಸಿದರು. ಉತ್ಪನ್ನ ವಿನ್ಯಾಸ, ವ್ಯವಹಾರ ಯೋಜನೆ ಅಭಿವೃದ್ಧಿಗೆ ಎನ್‌ಐಟಿಕೆಯ ಹಳೆಯ ವಿದ್ಯಾರ್ಥಿಗಳು (Alumni) ಹೂಡಿಕೆದಾರರಾಗಿ ಹಾಗೂ ಮಾರ್ಗದರ್ಶಕರಾಗಿ ಬೆಂಬಲ ನೀಡಲಿದ್ದಾರೆ.