.jpeg)
ಮಂಗಳೂರು, ಆಗಸ್ಟ್12 : ಭವ್ಯ ಭಾರತವನ್ನು ನಿರ್ಧರಿಸುವವರು ಯುವ ಸಮೂಹ ಆಗಿರಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ಪುರಭವನದಲ್ಲಿ ನಡೆದ ಯಂಗ್ ಡೆಮಾಕ್ರಟ್ಸ್ ಮಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಂಘಟನಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಯೂತ್ ಅಸೆಂಬ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಭಾರತ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಜಾಯಿಂಟ್ ಕನ್ವೀನರ್ ಮೂನಿಶ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ಕಾರ್ಯಕ್ರಮದ ಆರಂಭದಲ್ಲಿ ರಾಜ್ಯ ಜಾಯಿಂಟ್ ಕನ್ವೀನರ್ ಅಶರ್ ನಾಗುಂಡಿ ಧ್ವಜಾರೋಹಣ ನೆರವೇರಿಸಿದರು. ನಂತರ ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಹಾಗೂ ನಗರ ಸಮಿತಿಗಳ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ದೇಶವನ್ನು ಬದಲಾಯಿಸುತ್ತೇವೆ ಎಂಬ ಪ್ರತಿಜ್ಞೆ ಮಾಡಿರುವ ಯುವ ನಾಯಕರನ್ನು ಈ ಸಮಿತಿಗೆ ಆಯ್ಕೆ ಮಾಡಲಾಗಿದೆ. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಯುವ ನಾಯಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ನೂತನ ಪದಾಧಿಕಾರಿಗಳ ವಿವರ:
ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ: ಕನ್ವೀನರ್ ಆಗಿ ನ್ಯಾಯವಾದಿ ಅಸ್ಮಾ ಬೆಳ್ತಂಗಡಿ, ಜಾಯಿಂಟ್ ಕನ್ವೀನರ್‌ಗಳಾಗಿ ತೌಸಿಫ್ ಕಕ್ಕಿಂಜೆ, ಶಾಕಿರ್ ರಹ್ಮಾನ್, ಭುವನೇಶ್ ಬಂಟ್ವಾಳ ಹಾಗೂ ವಿವಿಧ ಸಮಿತಿ ಸದಸ್ಯರು ಆಯ್ಕೆಯಾಗಿದ್ದಾರೆ.
ಮಂಗಳೂರು ನಗರ ಜಿಲ್ಲಾ ಸಮಿತಿ: ಕನ್ವೀನರ್ ಆಗಿ ಮುಹಮ್ಮದ್ ಇರ್ಫಾನ್ ತುಂಬೆ, ಜಾಯಿಂಟ್ ಕನ್ವೀನರ್‌ಗಳಾಗಿ ಸುನೀತಾ ಸಾಲ್ಧಾನಾ, ಅಬ್ದುಲ್ ತನ್ವೀರ್ ಉಳ್ಳಾಲ ಹಾಗೂ ಇತರೆ ಸಮಿತಿ ಸದಸ್ಯರು ಆಯ್ಕೆಯಾಗಿದ್ದಾರೆ.
ವೇದಿಕೆಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ, ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ನೀಮ್, ವಿಮೆನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯಾ ಕಣ್ಣೂರ್, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರ್, ನಗರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು ಹಾಗೂ ಯಂಗ್ ಡೆಮಾಕ್ರಟ್ಸ್ ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


.jpeg)

.jpeg)