ಕಾರವಾರ, ಆಗಸ್ಟ್ 20 :ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ರೆಸಾರ್ಟ್‌ನಲ್ಲಿ ನುಗ್ಗಿದ ಕಪ್ಪು ಚಿರತೆ( Black Panther) ಜರ್ಮನ್ ಶೆಫರ್ಡ್ ನಾಯಿ ಭಕ್ಷಿಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿ ಮುಂದುವರಿದಿದೆ. ದಾಂಡೇಲಿಯ ಹಸನ್ಮಾಳ ಪ್ರದೇಶದಲ್ಲಿರುವ ವೈಲ್ಡರ್ ನೆಸ್ಟ್ ರೆಸಾರ್ಟ್‌ನಲ್ಲಿ ಕಪ್ಪು ಚಿರತೆಯೊಂದು ನಸುಕಿನ ಜಾವ ದಾಳಿ ನಡೆಸಿದ್ದು, ರೆಸಾರ್ಟ್‌ನಲ್ಲಿದ್ದ ಸಾಕು ನಾಯಿಯನ್ನು ಕೊಂದು ತಿಂದಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಈ ಸಂಪೂರ್ಣ ದೃಶ್ಯಾವಳಿ ರೆಸಾರ್ಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಹಸನ್ಮಾಳದಲ್ಲಿರುವ 'ವೈಲ್ಡರ್ ನೆಸ್ಟ್ ರೆಸಾರ್ಟ್' ನಲ್ಲಿ ಈ ಘಟನೆ ಸಂಭವಿಸಿದೆ. ಸೋಮವಾರ ನಸುಕಿನ ಜಾವ ಈ ಕೃತ್ಯ ನಡೆದಿದೆ.
ಅರಣ್ಯ ಪ್ರದೇಶದಂಚಿನಲ್ಲಿರುವ ಈ ರೆಸಾರ್ಟ್‌ಗೆ ನಸುಕಿನ ಜಾವ ಏಕಾಏಕಿ ನುಗ್ಗಿದ ಅಪರೂಪದ ಕಪ್ಪು ಚಿರತೆ ಅಲ್ಲಿಯೇ ಇದ್ದ ಜರ್ಮನ್ ಶೆಫರ್ಡ್ ತಳಿಯ ನಾಯಿಯ ಮೇಲೆ ಭೀಕರ ದಾಳಿ ನಡೆಸಿದೆ. ಚಿರತೆಯ ಅನಿರೀಕ್ಷಿತ ಹಾಗೂ ಮಿಂಚಿನ ದಾಳಿಗೆ ಸಿಲುಕಿದ ಜರ್ಮನ್ ಶೆಫರ್ಡ್ ನಾಯಿ ಚಿರತೆಗೆ ಆಹಾರವಾಗಿದೆ. ರೆಸಾರ್ಟ್ ಆವರಣದಲ್ಲಿ ನಡೆದ ಈ ಕಪ್ಪು ಚಿರತೆಯ ಚಲನವಲನ ಹಾಗೂ ನಾಯಿಯ ಮೇಲಿನ ದಾಳಿಯ ಸಂಪೂರ್ಣ ದೃಶ್ಯಗಳು ರೆಸಾರ್ಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಜನನಿಬಿಡ ಪ್ರದೇಶ ಹಾಗೂ ಪ್ರವಾಸಿ ತಾಣಗಳಲ್ಲಿ ಇಂತಹ ಕ್ರೂರ ವನ್ಯಜೀವಿಗಳು, ಅದರಲ್ಲೂ ವಿಶೇಷವಾಗಿ ಕಪ್ಪು ಚಿರತೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ತೀವ್ರ ಭೀತಿಯನ್ನು ಹುಟ್ಟುಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.