ಬೆಂಗಳೂರು ಆಗಸ್ಟ್ 17 : ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಹಿರಿಯ ನಾಯಕಿ ಹಾಗೂ ಎಂಎಲ್ಸಿ ಉಮಾಶ್ರೀ ಅವರ ಹೆಸರನ್ನು ಸೂಚಿಸಿ ಮೇಲ್ಮನೆ ಕಾರ್ಯದರ್ಶಿಗೆ ಸೋಮವಾರ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಸಭಾನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮೇಲ್ಮನೆ ಕಾರ್ಯದರ್ಶಿಗೆ ಈ ಪ್ರಸ್ತಾವನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್, ಬಸನಗೌಡ ಬಾದರ್ಲಿ, ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮಾಂಕಾಳ ವೈದ್ಯ ಹೆಸರು ನಾಮನಿರ್ದೇಶನ:
ಇದೇ ವೇಳೆ, ಕರ್ನಾಟಕ ವಿಧಾನಸಭೆಯ ಉಪಾಸಭಾಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಂಕಾಳ ವೈದ್ಯ ಅವರ ಹೆಸರನ್ನು ಸೂಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಭಾನಾಯಕರೂ ಆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಸೋಮವಾರ ಈ ಪ್ರಸ್ತಾವನೆ ಒಪ್ಪಿಸಿದರು.
ಈ ಪ್ರಕ್ರಿಯೆಯ ವೇಳೆ ಸಚಿವರು ಹಾಗೂ ಪ್ರಮುಖ ಶಾಸಕರಾದ ಲಕ್ಷ್ಮಣ್ ಸವದಿ, ಬಾಲಕೃಷ್ಣ, ಶಾಸಕ ಶಿವರಾಮ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದು ಸಾಥ್ ನೀಡಿದರು.