BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Bengaluru ಬೆಂಗಳೂರಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಯುವತಿಯರ ಕಥೆಗೆ ಬಿಗ್ ಟ್ವಿಸ್ಟ್..!


ಬೆಂಗಳೂರು, ಆಗಸ್ಟ್ 09 : ಬೆಂಗಳೂರಿನಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇಬ್ಬರು ಯುವತಿಯರ ಸಾವಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ನೇಪಾಳ ಮೂಲದ  22 ವರ್ಷದ ಸಿರ್ಜನಾ ಹಾಗೂ 23 ವರ್ಷದ ರಿತಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸುವ ಆಸೆ ಹೊಂದಿದ್ದರು ಎನ್ನಲಾಗಿದ್ದು, ಆದರೆ ಕುಟುಂಬ ಹಾಗೂ ಸಮಾಜ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಆತಂಕದಿಂದ ತೀವ್ರವಾಗಿ ನೊಂದಿದ್ದರು ಎಂದು ಪೊಲೀಸರು ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಬಾಲ್ಯದಿಂದಲೂ ಜೊತೆಯಾಗಿದ್ದ ಯುವತಿಯರು..

ಸಿರ್ಜನಾ ಮತ್ತು ರಿತಾ ಸಂಬಂಧಿಕರಾಗಿದ್ದು, ನೇಪಾಳದಲ್ಲಿ ಒಟ್ಟಿಗೆ ಓದಿ ಬೆಳೆದಿದ್ದರು ಎನ್ನಲಾಗಿದೆ. ಬಾಲ್ಯದಿಂದಲೇ ಇಬ್ಬರೂ ಆಪ್ತರಾಗಿದ್ದ ಕಾರಣ ಅವರ ಸಂಬಂಧದ ಕುರಿತು ಊರಿನಲ್ಲಿ ಚರ್ಚೆಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಬಳಿಕ ಕುಟುಂಬಸ್ಥರು ಇಬ್ಬರನ್ನೂ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರೂ, ವಾರದಲ್ಲಿ ಮೂರು-ನಾಲ್ಕು ಬಾರಿ ಭೇಟಿಯಾಗುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಮದುವೆ ವಿಚಾರವೇ ಆತಂಕಕ್ಕೆ ಕಾರಣ..?

ಘಟನೆ ನಡೆದ ದಿನ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬದಲ್ಲಿ ಮದುವೆ ವಿಚಾರ ಪ್ರಸ್ತಾಪವಾಗಿತ್ತು ಎನ್ನಲಾಗಿದೆ. ಈ ವೇಳೆ ತಮ್ಮ ಸಂಬಂಧವನ್ನು ಕುಟುಂಬ ಹಾಗೂ ಸಮಾಜ ಒಪ್ಪಿಕೊಳ್ಳುವುದಿಲ್ಲ, ಒಟ್ಟಿಗೆ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ರೀತಿಯಲ್ಲಿ ಇಬ್ಬರೂ ಮಾತನಾಡಿಕೊಂಡಿದ್ದರು ಎಂದು ವಿಚಾರಣೆ ವೇಳೆ ಕುಟುಂಬಸ್ಥರಿಂದ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಈ ಭಾವನಾತ್ಮಕ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಇಬ್ಬರು ಯುವತಿಯರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಇಬ್ಬರ ನಡುವಿನ ಸಂಬಂಧ, ಘಟನೆಗೂ ಮುನ್ನ ನಡೆದ ಬೆಳವಣಿಗೆಗಳು ಹಾಗೂ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!