ಬೆಂಗಳೂರು , ಆಗಸ್ಟ್ 07: ಕರ್ನಾಟಕ ರಾಜ್ಯದ ಸ್ಟಾರ್ ಹೋಟೇಲುಗಳಿಗೆ ಆಹಾರ ಇಲಾಖೆ ಶಾಕ್ ನೀಡಿದೆ. ಆಹಾರ ಗುಣಮಟ್ಟ ಪರಿಶೀಲನೆಗೆ 30 ತಂಡಗಳನ್ನು ರಚನೆ ಮಾಡಿ ಅಖಾಡಕ್ಕೆ ಇಳಿಸಿದೆ.
ಆಹಾರ ಸುರಕ್ಷತೆಯ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸ್ಟಾರ್ ಹೋಟೇಲುಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗಕ್ಕೆ ತ್ರಿ ಸ್ಟಾರ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಇ-ಮೇಲ್ ಮುಖಾಂತರ ಹಲವಾರು ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದಾದ್ಯಂತ ಈ ಕಾರ್ಯಾಚರಣೆ ಆರಂಭಿಸಿದೆ. ವಿಶೇಷ ತಪಾಸಣಾ ಕಾರ್ಯಚರಣೆ ಕೈಗೊಳ್ಳಲು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಒಳಗೊಂಡ 30 ತಂಡಗಳನ್ನು ನೇಮಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿರುವ ತ್ರಿ ಸ್ಟಾರ್ ಹಾಗೂ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಅದರಡಿ ರೂಪಿಸಲಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪರವಾನಗಿ ಮತ್ತು ನೋಂದಣಿ) ನಿಯಮಗಳು, 2011 ರನ್ವಯ ವಿಶೇಷ ತಪಾಸಣೆ ನಡೆಸಿ, ಯಾವುದೇ ಲೋಪಗಳು ಅಥವಾ ಉಲ್ಲಂಘನೆಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಆದೇಶಿಸಿದ್ದು ಇದಕ್ಕೆ ಕೆಲವು ನಿಯಮಾವಳಿಗಳನ್ನು ರೂಪಿಸಲಾಗಿದೆ.
1. ಎಫ್‌ಎಸ್‌ಎಸ್‌ಐ (FSSAI) ನಿಗದಿಪಡಿಸಿರುವ ಪರಿಶೀಲನಾ ಚೆಕ್‌ಲಿಸ್ಟ್‌ನನ್ವಯ ಪ್ರತಿ ಹೋಟೆಲ್/ ಆಹಾರ ಉದ್ದಿಮೆಗಳನ್ನು ಪರಿಶೀಲಿಸುವುದು.
2. ಪ್ರತಿ ಹೋಟೆಲ್/ ಆಹಾರ ಉದ್ದಿಮಗಳಲ್ಲಿ ಹೆಚ್ಚಿನ ತನಿಖೆಯ ಉದ್ದೇಶಕ್ಕಾಗಿ ಅಗತ್ಯವಿರುವ ಸ್ಥಳಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸುವುದು
3. ಪ್ರತಿ ಹೋಟೆಲ್ ಗಳಲ್ಲಿ ಸಾರ್ವಜನಿಕರ ಸೇವನೆಯ ಮಾರಾಟಕ್ಕಾಗಿ ಇಟ್ಟಿರುವ/ ಪದರ್ಶಿಸಿರುವ ಆಹಾರ ಪದಾರ್ಥಗಳ ಕ್ಯಾಲೋರಿ (Calorie) ಮೌಲ್ಯ ಪ್ರದರ್ಶನದ ಕುರಿತು ಪರಿಶೀಲನೆ ನಡೆಸಬೇಕು. 4. ಕುರಿ, ಕೋಳಿ, ಮೀನು ಹಾಗೂ ಇತರೆ ಮಾಂಸಾಹಾರ ಪದಾರ್ಥಗಳ ಆಹಾರ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಖಾಸಗಿ ಪುಯೋಗಾಲಯಕ್ಕೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. 5. ನಿಗದಿಪಡಿಸಿರುವ ಪ್ರತಿ ಹೋಟೆಲ್/ ಆಹಾರ ಉದ್ದಿಮೆಗಳಲ್ಲಿ ತಪಾಸಣೆ ನಡೆಸಿದ ನಂತರ, ಸದರಿ ಆಹಾರ ಉದ್ದಿಮೆಯ Centralised Kitchen ವಿಳಾಸವನ್ನು ಪಡೆದು ಅಲ್ಲಿಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒಂದು ವೇಳೆ Centralised Kitchen ಇಲ್ಲದಿದ್ದಲ್ಲಿ, ಸಂಬಂಧಿತ ಹೋಟೆಲ್‌ನ ಮಾಲೀಕರು/ ವ್ಯವಸ್ಥಾಪಕರಿಂದ (Manager) ಈ ಕುರಿತು ಲಿಖಿತ ದೃಢೀಕರಣವನ್ನು ಪಡೆದು ಅವರ ಸಹಿಯನ್ನು ಪಡೆಯಬೇಕು.
6. ಕುರಿ, ಕೋಳಿ, ಮೀನು ಹಾಗೂ ಇತರೆ ಮಾಂಸಾಹಾರ ಪದಾರ್ಥಗಳ ಸಂಗ್ರಹಣೆ, ಶೀತೀಕರಣ (Cold Storage) ಹಾಗೂ ತಾಪಮಾನ ನಿಯಂತ್ರಣ (Temperature Control) ವ್ಯವಸ್ಥೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
7. ಕಚ್ಚಾ ಮತ್ತು ಸಿದ್ಧ ಆಹಾರಗಳ ಪ್ರತ್ಯೇಕ ಸಂಗ್ರಹಣೆ, Cross-Contamination ತಡೆಗಟ್ಟುವ ಕ್ರಮಗಳು ಹಾಗೂ Cold Chain ನಿರ್ವಹಣೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
8. ಕೇಂದ್ರದ ಆಹಾರ ಸುರಕ್ಷತಾಧಿಕಾರಿಗಳ (Central Food Safety Officer) ಸಮನ್ವಯದೊಂದಿಗೆ ಸದರಿ ವಿಶೇಷ ತಪಾಸಣಾ ಕಾರ್ಯಚರಣೆಗೆ ಕೈಗೊಳ್ಳುವಂತೆ ಸೂಚಿಸಿದೆ.
9. ತಪಾಸಣೆಯ ವೇಳೆ ಯಾವುದೇ ಗಂಭೀರ ಉಲ್ಲಂಘನೆಗಳು ಕಂಡುಬಂದಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು, 2011 ರನ್ವಯ ಕಾನೂನು ಕ್ರಮ ಕೈಗೊಳ್ಳಬೇಕು. ದಿನಾಂಕ 07.08.2026 ಮತ್ತು 08.08.2026 ರಂದು ನಿಗದಿತ ತಪಾಸಣ ಸ್ಥಳಗಳಲ್ಲಿ ತಕ್ಷಣದ ಕ್ರಮ ಜರುಗಿಸಲು ಸಂಬಂಧಿತ ಅಂಕಿತಾಧಿಕಾರಿ/ಆಹಾರ ಸುರಕ್ಷತಾ ಅಧಿಕಾರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 30(2)(d) ರಡಿ ಬೆಂಗಳೂರು ವ್ಯಾಪ್ತಿಗೆ ಮಾತ್ರ ಅಧಿಕಾರವನ್ನು ನೀಡಲಾಗಿದೆ. 10. ನಿಯೋಜಿಸಲಾಗಿರುವ ತಂಡಗಳ ಮೇಲ್ವಿಚಾರಣೆ ವಹಿಸುವ ಅಂಕಿತಾಧಿಕಾರಿಗಳು ಪುತಿ ಹೋಟೆಲ್/ ಆಹಾರ ಉದ್ದಿಮೆಗಳ ತನಿಖಾ ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವಂತೆ ಸೂಚಿಸಿದೆ.
https://youtube.com/shorts/cXAUM7VeK7A?feature=share