ಬಂಟ್ವಾಳ,ಆಗಸ್ಟ್ 29 : ನಿಯಮ ಹಾಗೂ ನಿಗದಿತ ಅವಧಿ ಮೀರಿ ಟೋಲ್ ಸಂಗ್ರಹ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ 73ರ ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಳೆದ ಹಲವಾರು ಸಮಯಗಳಿಂದ ವಿವಿಧ ರೀತಿಯ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ಟೋಲ್ ಗೇಟ್ ವಿರುದ್ಧ ಜಿಲ್ಲೆಯ ನಾಗರಿಕರಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇದಕ್ಕೆ ಸಾಕ್ಷಿಯಾಗಿ, ಕಳೆದ ವಾರ SDPI ಕರೆ ನೀಡಿದ್ದ ಡಿಸಿ ಕಚೇರಿ ಚಲೋ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಿದ್ದಾರೆ. ಜಿಲ್ಲಾದ್ಯಂತ ಹಲವು ಹೋರಾಟಗಳು ನಡೆದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ SDPI, ಬ್ರಹ್ಮರಕೊಟ್ಲು ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದೆ.
ಇತ್ತೀಚೆಗೆ ಬಂಟ್ವಾಳದಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಅವರ ಉಪಸ್ಥಿತಿಯಲ್ಲಿ ನಡೆದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ, ಮುಂದಿನ ಹಂತದ ಹೋರಾಟಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಧರಣಿ ಸತ್ಯಾಗ್ರಹ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿ ಚಲೋ, ಟೋಲ್ ಗೇಟ್‌ನಲ್ಲಿ ಪೋಸ್ಟರ್ ಪ್ರದರ್ಶನ, ಫ್ಲೆಕ್ಸ್ ಅಭಿಯಾನ, ಸಾರ್ವಜನಿಕರಿಗೆ ನೋಟಿಸ್ ಹಂಚಿ ಜಾಗೃತಿ ಮೂಡಿಸುವುದು, ಟೋಲ್ ಬಹಿಷ್ಕಾರ ಹಾಗೂ ಜೈಲ್ ಭರೋ ಸೇರಿದಂತೆ ವಿವಿಧ ಹಂತಗಳ ತೀವ್ರ ಚಳುವಳಿಗಳನ್ನು ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಬ್ರಹ್ಮರಕೊಟ್ಲು ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೆ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು SDPI ಕಾರ್ಯದರ್ಶಿ ಮಂಡಳಿ ಸಭೆ ಸ್ಪಷ್ಟಪಡಿಸಿದೆ. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ನವಾಝ್ ಕಟ್ಟೆ, ಸಮಿತಿ ಸದಸ್ಯರಾದ ಮೂನಿಶ್ ಅಲಿ, ರಹ್ಮಾನ್ ನಾವೂರು ಉಪಸ್ಥಿತರಿದ್ದರು.