Bantwal ವಿಟ್ಲದಲ್ಲಿ ಲೈಟ್ ಕಂಬಕ್ಕೆ ಗುದ್ದಿದ್ದ ಶಾಲಾ ಬಸ್, ಪವಾಡ ಸದೃಶ್ಯವಾಗಿ ಪಾರಾದ ವಿದ್ಯಾರ್ಥಿಗಳು
ಸುದ್ದಿವಾಣಿ
8/11/2026 01:16:00 PM
ಬಂಟ್ವಾಳ, ಆಗಸ್ಟ್ 11 : ಚಾಲಕನ ನಿಯಂತ್ರಣ ಕಳೆದುಕೊಂಡ ಶಾಲಾ ಬಸ್ಸೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ ಕುಂಟುಕುಡೇಲು ಇಳಿಜಾರಿನ ರಸ್ತೆಯಲ್ಲಿ ಸಾಗುತ್ತಿರುವಾಗ ತಾಂತ್ರಿಕ ದೋಷದಿಂದ ನೇರವಾಗಿ ಕೆಳಗಡೆ ಚಲಿಸಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ಸಂಪೂರ್ಣವಾಗಿ ತುಂಡಾಗಿ ಬಸ್ ಮೇಲೆ ಬಿದ್ದರೂ ಬಸ್ಸಿನಲ್ಲಿದ್ದ 15ಕ್ಕೂ ಅಧಿಕ ವಿದ್ಯಾರ್ಥಿಗಳು ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ. ಕೂಡಲೇ ಸ್ಥಳಿಯರು ಧಾವಿಸಿ ಬಂದು ಬಸ್ಸಿನಲ್ಲಿದ್ದ ಮಕ್ಕಳನ್ನು ರಕ್ಷಿಸಿ ಹೊರಗಡೆ ಕರೆತಂದಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಟ್ಯಾಗ್ಗಳು:
ದಕ್ಷಿಣ ಕನ್ನಡ