ಮಂಗಳೂರು, ಆಗಸ್ಟ್ 19: ಮಂಗಳೂರು - ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ಬ್ರಹ್ಮರಕೂಟ್ಲುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಅಕ್ರಮ ಟೋಲ್ ಗೇಟ್ ಅನ್ನು ಕೂಡಲೇ ಮುಚ್ಚಬೇಕು ಮತ್ತು ಸಾರ್ವಜನಿಕರ ಮೇಲಿನ ಹಗಲು ದರೋಡೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ SDPI ಬೃಹತ್ ‘ಡಿಸಿ ಕಚೇರಿ ಚಲೋ’ ಪಾದಯಾತ್ರೆಯನ್ನು ಮಂಗಳವಾರ ಹಮ್ಮಿಕೊಂಡಿತ್ತು.
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿವರೆಗೆ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಬೃಹತ್ ಪಾದಯಾತ್ರೆ ನಡೆಯಿತು.
ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಅವರು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರಿಗೆ ಪಂಜು ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
"ಸರ್ಕಾರ ಕೂಡಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಬೇಕು. ಬೇಡಿಕೆ ಈಡೇರಿಸಲು ವಿಫಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ, ಜಿಲ್ಲಾಧಿಕಾರಿ ಕಚೇರಿಯಿಂದ ನೇರವಾಗಿ ಬ್ರಹ್ಮರಕೂಟ್ಲಿಗೆ ಮರಳಿ ನಾಗರಿಕರನ್ನು ಒಗ್ಗೂಡಿಸಿ ಟೋಲ್ ಗೇಟ್ ತೆರವುಗೊಳಿಸುವ ಹೋರಾಟ ನಡೆಸಲಾಗುವುದು. ಎಂದು SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಿಯಾಝ್ ಫರಂಗಿಪೇಟೆ ಎಚ್ಚರಿಕೆ ನೀಡಿದರು.
SDTU ರಾಜ್ಯಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿಕಾರ್ಮಿಕರ ಬದುಕಿಗೆ ದೊಡ್ಡ ಹೊರೆಯಾಗಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಕಡ್ಡಾಯವಾಗಿ ತೆರವುಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಮಾತನಾಡಿದ SDTU ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಟೋಲ್ ಗೇಟ್ ತೆರವುಗೊಳ್ಳುವವರೆಗೆ ಹೋರಾಟ ನಿಲ್ಲದು ಎಂದರು ಮತ್ತು ಲೋಕಸಭಾ ಸದಸ್ಯರು ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
SDPI ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ಪಡೀಲ್ ಟೋಲ್ ಗೇಟ್ ವಿರೋಧಿಸಿ ಮಾತನಾಡುತ್ತಾ, ಶಾಂತಿಯುತವಾಗಿ ಮನವಿ ಸಲ್ಲಿಸಲು ಬಂದಿರುವ ಪ್ರತಿಭಟನಾಕಾರರ ಮನವಿಯನ್ನು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಸ್ವೀಕರಿಸಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳು ಸ್ಪಂದಿಸದಿದ್ದರೆ ಹೆದ್ದಾರಿ ಸ್ತಬ್ಧಗೊಳಿಸುವುದಾಗಿ ಎಚ್ಚರಿಸಿದರು. ಅಕ್ರಮ ಟೋಲ್ ಗೇಟ್ ಸಂಪೂರ್ಣವಾಗಿ ತೆರವಾಗುವವರೆಗೆ ಪಕ್ಷದಿಂದ ನಿರಂತರ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರು ಜಿಲ್ಲಾಧಿಕಾರಿಯವರ ಪರವಾಗಿ ಮನವಿ ಸ್ವೀಕರಿಸಲು ಆಗಮಿಸಿದ ಅಧಿಕಾರಿಗಳಿಗೆ ಪಕ್ಷದ ಬೇಡಿಕೆಗಳನ್ನು ಮಂಡಿಸಿ ಮನವಿ ಪತ್ರ ಹಸ್ತಾಂತರಿಸಿದರು. ಅಶ್ರಫ್ ಅಡ್ಡೂರು, ಮೂನಿಶ್ ಅಲಿ, ಪಿಲಿಪ್ ಹೆನ್ರಿ ಡಿ ಸೋಜ, ಅಬ್ದುಲ್ ರಹಿಮಾನ್ ಬೋಳಿಯಾರ್, ಇನಾಸ್ ರೋಡ್ರಿಗಸ್, ಸಿದ್ದೀಕ್ ಪುತ್ತೂರು, ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ನವಾಝ್ ಕಟ್ಟೆ, ಅಝೀಝ್ ಸುರತ್ಕಲ್, ಜಮಾಲ್ ಜೋಕಟ್ಟೆ, ಯಾಸಿನ್ ಅರ್ಕುಳ ಸೇರಿದಂತೆ ಹಲವು ಅಸೆಂಬ್ಲಿ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.