ಮಂಗಳೂರು, ಆಗಸ್ಟ್ 23: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಮಾಫಿ ಸಾಕ್ಷಿ ವಿಚಾರ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಸಂಕಷ್ಟದಿಂದ ಪಾರಾಗಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ ಹೋಗಿದ್ದಾರೆ.
ಮಂಗಳೂರಿನ ಶ್ರೀಕ್ಷೇತ್ರ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತಾ ಹಾಗೂ ಗುಳಿಗ ದೈವದ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ಅವರು ವಿಶೇಷ ಸೇವೆ ಸಲ್ಲಿಸಿದ್ದಾರೆ. ದೈವದ ಸನ್ನಿಧಿಯಲ್ಲಿ ಕೋಲ ಸೇವೆ ನಡೆಸಿ, ವಿಶೇಷ ಪೂಜೆ ಹಾಗೂ ಹರಕೆ ಅರ್ಪಿಸಿದ್ದಾರೆ.
ದೈವದ ಮೊರೆ ಹೋಗಲು ಕಾರಣವೇನು?
ಮಾಫಿ ಸಾಕ್ಷಿ ಕಂಟಕ: ಈ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಸಾಧ್ಯತೆಯಿದ್ದು, ಇದು ನಟ ದರ್ಶನ್‌ಗೆ ಕಾನೂನು ತೊಡಕುಗಳನ್ನು ತಂದೊಡ್ಡಬಹುದು ಎಂಬ ಆತಂಕ ಎದುರಾಗಿದೆ. ಕೃತ್ಯ ಹಾಗೂ ಕಾನೂನು ಹೋರಾಟದ ಸಂಕಷ್ಟದಿಂದ ದರ್ಶನ್ ಪಾರಾಗಲಿ ಎಂದು ವಿಜಯಲಕ್ಷ್ಮಿ ಅವರು ಮಂಗಳೂರಿನ ಪ್ರಸಿದ್ಧ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೈವಾನುಗ್ರಹ ಕೋರಿದ್ದಾರೆ.
