ಸಿಡ್ನಿ,(ಆಸ್ಟ್ರೇಲಿಯಾ) ಆಗಸ್ಟ್ 19 : ಕೇವಲ ಐದು ನಿಮಿಷ ಸ್ನಾನ ಮಾಡಿದ್ದಕ್ಕೆ ಭಾರತೀಯ ಮೂಲದ ಮಹಿಳೆಯೊಬ್ಬರಿಗೆ 1.3 ಲಕ್ಷ ರೂಪಾಯಿ ದಂಡ ವಿಧಿ ಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವಮಿಕಾ ಎಂಬ ಮಹಿಳೆಗೆ ಕೇವಲ ಐದು ನಿಮಿಷ ಸ್ನಾನ ಮಾಡಿದ್ದಕ್ಕೆ 1.3 ಲಕ್ಷ ರೂಪಾಯಿಗಳಷ್ಟು ಭಾರಿ ದಂಡ ವಿಧಿಸಲಾಗಿದೆ.
ಚಳಿಯಾಗುತ್ತದೆ ಎಂಬ ಕಾರಣಕ್ಕೆ ಬಾತ್‌ರೂಮ್‌ನ ಎಕ್ಸಾಸ್ಟ್ ಫ್ಯಾನ್ ಆನ್ ಮಾಡದೆ ಸ್ನಾನ ಮಾಡುವಾಗ ಉಂಟಾದ ಆವಿಯಿಂದ ಕಟ್ಟಡದ ಫೈರ್ ಅಲಾರಂ ಸಕ್ರಿಯಗೊಂಡಿದೆ.
ತುರ್ತು ಸೇವೆಯ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯನ್ ಡಾಲರ್ A$1,800 (ಭಾರತೀಯ ರೂಪಾಯಿಗಳಲ್ಲಿ ಸುಮಾರು 1.3 ಲಕ್ಷ) ಶುಲ್ಕ ವಿಧಿಸಲಾಗಿದೆ ಎಂದು ಅವರು ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ತಿಳಿಸಿದ್ದಾರೆ.
ಬಾತ್‌ರೂಮ್‌ಗೆ ತೀರಾ ಸಮೀಪದಲ್ಲಿ ಫೈರ್ ಡಿಟೆಕ್ಟರ್ ಅಳವಡಿಸಿರುವುದೇ ಈ ಸಮಸ್ಯೆಗೆ ಕಾರಣ ಎಂದು ವಮಿಕಾ ಪ್ರಶ್ನಿಸಿದ್ದಾರೆ. ಸಾಮಾನ್ಯ ಸ್ನಾನದ ಆವಿಗೆ ಫೈರ್ ಅಲಾರಂ ಸಕ್ರಿಯಗೊಳ್ಳಬಹುದೇ ಮತ್ತು ತುರ್ತು ಸೇವೆಯ ವೆಚ್ಚವನ್ನು ನಿವಾಸಿಗಳೇ ಭರಿಸಬೇಕೇ ಎಂಬ ಪ್ರಶ್ನೆಗಳು ಎದ್ದಿವೆ.
ಕಟ್ಟಡದ ಫೈರ್ ಅಲಾರಂ ವ್ಯವಸ್ಥೆ ಅತಿಯಾಗಿ ಸೂಕ್ಷ್ಮವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಬಾರಿಗೆ ನಡೆದ ಈ ಘಟನೆಗೆ ಇಷ್ಟು ದೊಡ್ಡ ಮೊತ್ತದ ಶುಲ್ಕ ವಿಧಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಅಲಾರಂ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಕಟ್ಟಡ ನಿರ್ವಹಣೆಗೆ ಮನವಿ ಮಾಡಲು ಸಲಹೆ ನೀಡಿದ್ದಾರೆ.