ನವದೆಹಲಿ ,ಆಗಸ್ಟ್ 01 : ಪೇಪರ್ ಲೀಕ್ ಮತ್ತಿತರ ಶೈಕ್ಷಣಿಕ ಅಕ್ರಮಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕಲು ನಿರ್ಧರಿದ್ದು ಮಹತ್ವದ ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಕಾಯ್ದೆ 2026’ಕ್ಕೆ ರಾಷ್ಟ್ರಪತಿ ಅವರು ಅಂಕಿತ ಹಾಕಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ‘ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ತಿದ್ದುಪಡಿ ಕಾಯ್ದೆ, 2026’ ಅಧಿಕೃತವಾಗಿ ಜಾರಿಗೆ ಬಂದಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಮಸೂದೆಯು ಅಂಗೀಕಾರಗೊಂಡ ಬಳಿಕ, ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಿದ್ದು, ಇದು ತಕ್ಷಣದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ
ಕೇಂದ್ರ ಲೋಕಸವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿ (RRB), ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ನೀಟ್ (NEET), ಸಿಇಟಿ ಸೇರಿದಂತೆ ಕೇಂದ್ರ ಸಚಿವಾಲಯಗಳು ಹಾಗೂ ವಿವಿಧ ಇಲಾಖೆಗಳು ನಡೆಸುವ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳು ಈ ಕಾಯ್ದೆಯ ಕಟ್ಟುನಿಟ್ಟಿನ ವ್ಯಾಪ್ತಿಗೆ ಬರಲಿವೆ
ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮವೆಸಗುವ ಸಂಘಟಿತ ಅಪರಾಧ ಗ್ಯಾಂಗ್‌ಗಳು, ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವವರು, ಕಿಡಿಗೇಡಿ ಕೋಚಿಂಗ್ ಸೆಂಟರ್‌ಗಳು ಹಾಗೂ ಸೇವಾ ಪೂರೈಕೆದಾರರ ವಿರುದ್ಧ ಅತ್ಯಂತ ಕಠಿಣ ಜೈಲು ಶಿಕ್ಷೆ ಮತ್ತು ಕೋಟ್ಯಂತರ ರೂಪಾಯಿಗಳವರೆಗೆ ಭಾರಿ ದಂಡ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷಾ ಸಮಯದಲ್ಲಿ ನಡೆಯಬಹುದಾದ ಸೈಬರ್ ದಾಳಿಗಳು, ತಾಂತ್ರಿಕ ಅಕ್ರಮಗಳು ಅಥವಾ ಆಂತರಿಕ ನೆರವನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಕಾನೂನುಬದ್ಧ ಅಧಿಕಾರ ನೀಡಲಾಗಿದೆ
ಈ ಹಿನ್ನೆಲೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು, ಪಾರದರ್ಶಕತೆ ತರಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರವು ಕಠಿಣ ಕಾನೂನು ರೂಪಿಸುವುದು ಅನಿವಾರ್ಯವಾಗಿತ್ತು. ಈಗ ರಾಷ್ಟ್ರಪತಿಗಳ ಅಂಕಿತದೊಂದಿಗೆ ಜಾರಿಗೆ ಬಂದಿರುವ ಈ ನೂತನ ಕಾಯ್ದೆಯು ಪರೀಕ್ಷಾ ಮಾಫಿಯಾಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕಲಿದ್ದು, ಪ್ರಾಮಾಣಿಕವಾಗಿ ಕಷ್ಟಪಟ್ಟು ಓದುವ ಯುವಜನತೆಯಲ್ಲಿ ಹೊಸ ವಿಶ್ವಾಸ ಮೂಡಿಸಿದೆ ಎಂದು ಸರ್ಕಾರ ತಿಳಿಸಿದೆ.
ಮಸೂದೆಯಲ್ಲಿರುವ ಪ್ರಮುಖ ಅಂಶಗಳು :
ಹೊಸ ತಿದ್ದುಪಡಿ ಪ್ರಕಾರ, ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರಿಗೆ 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸಂಘಟಿತ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಸಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಕೋಟಿ ವರೆಗೆ ದಂಡ ವಿಧಿಸುವ ಪ್ರಾಸ್ತಾಪವಿದೆ.
ಯಾವುದೇ ಕೋಚಿಂಗ್ ಸೆಂಟರ್ ಅಥವಾ ತರಬೇತಿ ಸಂಸ್ಥೆ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ಆ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸರ್ಕಾರಕ್ಕೆ ಲಭ್ಯವಾಗಲಿದೆ.
ಇದಲ್ಲದೆ, ಪರೀಕ್ಷೆಗಳನ್ನು ನಡೆಸುವ ಖಾಸಗಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ, ಅವುಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ನಿರ್ದೇಶಕರಿಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.
ಫಾಸ್ಟ್ ಟ್ರ್ಯಾಕ್ ತನಿಖೆಗೆ ಆದ್ಯತೆ :
ಪರೀಕ್ಷಾ ಅಕ್ರಮ ಪ್ರಕರಣಗಳ ತನಿಖೆಯನ್ನು ವಿಳಂಬವಾಗದಂತೆ ಮಾಡಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಪ್ರಕರಣದ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವುದು, ನಂತರ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಲ್ಲಿ ಪ್ರತಿದಿನ ವಿಚಾರಣೆ ನಡೆಸುವುದು, ಹಾಗೂ ಆರೋಪಪಟ್ಟಿ ಸಲ್ಲಿಕೆಯಾದ ಮೂರು ತಿಂಗಳೊಳಗೆ ತೀರ್ಪು ನೀಡುವುದು ಕಡ್ಡಾಯವಾಗಲಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ತ್ವರಿತ ನ್ಯಾಯ ದೊರಕುವ ನಿರೀಕ್ಷೆ ಇದೆ.